ADVERTISEMENT

ಫ್ರಾನ್ಸ್‌ ಸವಾಲು ಮೀರುವುದೇ ಉರುಗ್ವೆ

ಇಂದು ಎಂಟರ ಘಟ್ಟದ ಮೊದಲ ಹಣಾಹಣಿ: ಭರವಸೆಯಲ್ಲಿ ಬಾಪೆ, ಲೂಯಿಸ್‌ ಸ್ವಾರೆಜ್‌

ರಾಯಿಟರ್ಸ್
Published 5 ಜುಲೈ 2018, 20:25 IST
Last Updated 5 ಜುಲೈ 2018, 20:25 IST
ಫ್ರಾನ್ಸ್‌ ತಂಡದ ಕೈಲಿಯನ್‌ ಬಾಪೆ (ಎಡ) ಮತ್ತು ಉರುಗ್ವೆಯ ಲೂಯಿಸ್‌ ಸ್ವಾರೆಜ್‌ ಅವರು ಎಲ್ಲರ ಆಕರ್ಷಣೆಯಾಗಿದ್ದಾರೆ ಎಎಫ್‌ಪಿ ಚಿತ್ರ
ಫ್ರಾನ್ಸ್‌ ತಂಡದ ಕೈಲಿಯನ್‌ ಬಾಪೆ (ಎಡ) ಮತ್ತು ಉರುಗ್ವೆಯ ಲೂಯಿಸ್‌ ಸ್ವಾರೆಜ್‌ ಅವರು ಎಲ್ಲರ ಆಕರ್ಷಣೆಯಾಗಿದ್ದಾರೆ ಎಎಫ್‌ಪಿ ಚಿತ್ರ   

ನಿಜ್ನಿ ನೊವಗೊರೊದ್‌, ರಷ್ಯಾ: ಈ ಬಾರಿಯ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೋಲರಿಯದ ಕುದುರೆಯಂತೆ ಓಡುತ್ತಿರುವ ಫ್ರಾನ್ಸ್‌ ಮತ್ತು ಉರುಗ್ವೆ ತಂಡಗಳಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.

ನಿಜ್ನಿ ನೊವಗೊರೊದ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್‌ ಪ್ರವೇಶಿಸಲಿದೆ. ಸೋತವರು ಟೂರ್ನಿಯಿಂದ ಹೊರಬೀಳಲಿದ್ದಾರೆ. ಹೀಗಾಗಿ ಎರಡೂ ತಂಡಗಳ ಪಾಲಿಗೆ ಇದು ಮಹತ್ವದ ಹೋರಾಟವಾಗಿದೆ.

ಉರುಗ್ವೆ ತಂಡ ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿದ್ದರೆ, ಫ್ರಾನ್ಸ್‌ ತಂಡ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದೆ. ಹೀಗಾಗಿ ಶುಕ್ರವಾರ ನೊವಗೊರೊದ್‌ ಕ್ರೀಡಾಂಗಣದಲ್ಲಿ ರೋಚಕ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ADVERTISEMENT

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಉರುಗ್ವೆ ತಂಡ ಪೋರ್ಚುಗಲ್‌ ಸವಾಲು ಮೀರಿತ್ತು. ಫ್ರಾನ್ಸ್‌ ತಂಡ ಅರ್ಜೆಂಟೀನಾವನ್ನು ಸೋಲಿಸಿತ್ತು.

ಡೀಗೊ ಗೊಡಿನ್‌ ಸಾರಥ್ಯದ ಉರುಗ್ವೆ ಈ ಬಾರಿ ಎದುರಾಳಿಗಳಿಗೆ ಕೇವಲ ಒಂದು ಗೋಲು ಬಿಟ್ಟುಕೊಟ್ಟಿದೆ. ಜೋಸ್‌ ಮರಿಯಾ ಗಿಮೆನೆಜ್‌, ಮಾರ್ಟಿನ್‌ ಕ್ಯಾಸೆರಸ್‌, ಡೀಗೊ ಲಾಕ್ಸಲ್ಟ್‌ ಮತ್ತು ಗೋಲ್‌ಕೀಪರ್‌ ಫರ್ನಾಂಡೊ ಮುಸಲೆರಾ ಈ ತಂಡದ ಭರವಸೆಯಾಗಿದ್ದಾರೆ.

ಉರುಗ್ವೆ ತಂಡ ಶುಕ್ರವಾರ ಫ್ರಾನ್ಸ್‌ ತಂಡವನ್ನು ಮಣಿಸಿದರೆ ವಿಶ್ವಕಪ್‌ನಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದ ದಾಖಲೆ ತನ್ನದಾಗಿಸಿಕೊಳ್ಳಲಿದೆ. ಹೀಗಾಗಿ ಕೋಚ್‌ ಆಸ್ಕರ್‌ ತಬ್ರೇಜ್‌ ಈ ಪಂದ್ಯದಲ್ಲಿ 4–4–2ರ ಯೋಜನೆಯೊಂದಿಗೆ ತಂಡವನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ.

ಪೋರ್ಚುಗಲ್‌ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ಎಡಿನ್ಸನ್‌ ಕಾವನಿ ಈ ಪಂದ್ಯದಲ್ಲಿ ಆಡುವುದು ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಕಾವನಿ ಅಲಭ್ಯರಾದರೆ ಅವರ ಬದಲು ಕ್ರಿಸ್ಟಿಯನ್‌ ಸ್ಟುವಾನಿಗೆ ಅವಕಾಶ ಸಿಗಬಹುದು. ಲೂಯಿಸ್‌ ಸ್ವಾರೆಜ್‌ ಕೂಡ ಮಿಂಚಬಲ್ಲರು.

ಫ್ರಾನ್ಸ್‌ಗೆ ಜಯದ ಜಪ: ಫ್ರಾನ್ಸ್‌ ಕೂಡಾ ಜಯದ ತೋರಣ ಕಟ್ಟುವ ಉತ್ಸಾಹದಲ್ಲಿದೆ. ಕೈಲಿಯನ್ ಬಾಪೆ, ಹ್ಯೂಗೊ ಲಾರಿಸ್‌, ಬೆಂಜಮಿನ್‌ ಪ್ಯಾವರ್ಡ್‌, ಸ್ಯಾಮುಯೆಲ್‌ ಉಮಟಿಟಿ ಮತ್ತು ಪಾಲ್‌ ಪೊಗ್ಬಾ ಅವರಂತಹ ಪ್ರತಿಭಾನ್ವಿತರು ಈ ತಂಡದಲ್ಲಿದ್ದಾರೆ.

ಆ್ಯಂಟೊಯಿನ್‌ ಗ್ರೀಜ್‌ಮನ್‌, ಕೊರೆಂಟಿನ್‌ ಟೊಲಿಸ್‌ ಮತ್ತು ಒಲಿವರ್‌ ಗಿರೌಡ್‌ ಅವರೂ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಸುಲಭವಾಗಿ ಭೇದಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

*

***

ಪ್ರಮುಖ ಮಾಹಿತಿಗಳು

*ಕಳೆದ ಎಂಟು ಮುಖಾಮುಖಿಗಳಲ್ಲಿ ಉರುಗ್ವೆ ತಂಡ ಮೂರು ಬಾರಿ ಫ್ರಾನ್ಸ್‌ ತಂಡವನ್ನು ಸೋಲಿಸಿದೆ. ನಾಲ್ಕರಲ್ಲಿ ಡ್ರಾ ಮಾಡಿಕೊಂಡಿರುವ ಈ ತಂಡ ಒಂದರಲ್ಲಿ ಪರಾಭವಗೊಂಡಿದೆ.

*ವಿಶ್ವಕಪ್‌ನಲ್ಲಿ ಉರುಗ್ವೆ ತಂಡ ಫ್ರಾನ್ಸ್‌ ಎದುರು ಒಮ್ಮೆಯೂ ಸೋತಿಲ್ಲ. ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಉರುಗ್ವೆ ಒಂದರಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಡ್ರಾ ಆಗಿವೆ.

*ದಕ್ಷಿಣ ಅಮೆರಿಕದ ತಂಡಗಳ ವಿರುದ್ಧ ವಿಶ್ವಕಪ್‌ನಲ್ಲಿ ಆಡಿರುವ ಹಿಂದಿನ ಒಂಬತ್ತು ಪಂದ್ಯಗಳ ಪೈಕಿ ಫ್ರಾನ್ಸ್‌ ಒಂದರಲ್ಲೂ ಸೋತಿಲ್ಲ. ಐದರಲ್ಲಿ ಗೆದ್ದಿರುವ ಈ ತಂಡ ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.