ADVERTISEMENT

ಫುಟ್‌ಬಾಲ್ ಸಹೋದರರ ಹೋಮ್ ಮೇಡ್ ಜಿಮ್

ವಿಕ್ರಂ ಕಾಂತಿಕೆರೆ
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST
ಗುರುಸಿಮ್ರತ್ ಸಿಂಗ್ ಗಿಲ್
ಗುರುಸಿಮ್ರತ್ ಸಿಂಗ್ ಗಿಲ್   

ಇಟ್ಟಿಗೆಗಳಿಂದ ನಿರ್ಮಿಸಿದ ಗೋಡೆಗಳಿಂದ ಕೂಡಿದ ಹೊರ ಆವರಣದಲ್ಲಿ ದೂರದಿಂದ ಗೆಳೆಯರು ತೂರುವ ಚೆಂಡನ್ನು ಜಿಗಿದು ಹಿಡಿಯುವ, ಎಡ–ಬಲಕ್ಕೆ ಬಗ್ಗಿ ತಡೆಯುವ ಪ್ರಭುಶುಖನ್ ಗಿಲ್ ಒಳಗೆ, ಪೇಂಟ್ ಮಾಸಿ ಹೋಗಿರುವ ಗೋಡೆಗಳ ಕೊಠಡಿಯಲ್ಲಿ ಬಾರ್ಬೆಲ್ ಎತ್ತುತ್ತಾರೆ; ಡಂಬೆಲ್‌ ಹಿಡಿದು ಕಸರತ್ತು ಮಾಡುತ್ತಾರೆ. ಅವರಿಗೆ ದೊಡ್ಡಣ್ಣ ಗುರುಸಿಮ್ರತ್ ಗಿಲ್ ಜೊತೆಯಾಗುತ್ತಾರೆ.

ಪಂಜಾಬ್‌ನ್ ಲುಧಿಯಾನ ಜಿಲ್ಲೆಯೆ ಸರಭ ಗ್ರಾಮದ ಪ್ರಭುಶುಖನ್ ಗಿಲ್ ಮತ್ತು ಗುರುಸಿಮ್ರತ್ ಗಿಲ್ ಭಾರತ ಫುಟ್‌ಬಾಲ್‌ನ ಯುವ ಮಿನುಗು ತಾರೆಗಳು. ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳ ಸದಸ್ಯರು. ಪ್ರಭುಶುಖನ್ ಗೋಲ್‌ ಕೀಪರ್, ಗುರುಸಿಮ್ರತ್ ಡಿಫೆಂಡರ್. ಕೋವಿಡ್ ಸಂದರ್ಭದ ‘ಗೃಹಬಂಧನ’ದಿಂದಾಗಿ ಅಭ್ಯಾಸ ವ್ಯಾಯಾಮ ನಿಂತುಹೋದ ಕಾರಣ ಫಿಟ್‌ನೆಸ್ ಕಾಪಾಡಿಕೊಳ್ಳಲು ಇಬ್ಬರೂ ಕಂಡುಕೊಂಡ ದಾರಿ, ಮನೆಯಲ್ಲೇ ಜಿಮ್ ನಿರ್ಮಾಣ ಮಾಡುವುದು.

ಪೇಟೆಗೆ ಹೋಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಂದ ಅಣ್ಣ–ತಮ್ಮಂದಿರ ಜೋಡಿ ಅವುಗಳನ್ನೆಲ್ಲ ಜೋಡಿಸಿ ‘ವ್ಯಾಯಾಮ ಶಾಲೆ‘ ತಯಾರು ಮಾಡಿದರು. ಕುಳಿತುಕೊಳ್ಳಲು ಹಳೆಯ ಕುರ್ಚಿ, ಮಲಗಿ ಡಂಬೆಲ್ಸ್ ಎತ್ತಲು ಹಳೆಯ ಮ್ಯಾಟ್ ಬಳಕೆಯಾಯ್ತು. ಒಟ್ಟಿನಲ್ಲಿ ಮನೆಯ ವಿಶಾಲ ಹೊರ ಮತ್ತು ಒಳಾಂಗಣದಲ್ಲಿ ಫಿಟ್‌ನೆಸ್ ಕಸರತ್ತಿಗೆ ವೇದಿಕೆ ಸಜ್ಜಾಯಿತು. ಆರಂಭದಲ್ಲಿ ಇವರಿಬ್ಬರಿಗಷ್ಟೇ ಸೀಮಿತವಾಗಿದ್ದ ಜಿಮ್ ಈಗ ಸಮೀಪದ ಇತರ ಕ್ರೀಡಾಪಟುಗಳ ಬಳಕೆಗೂ ಲಭ್ಯವಿದೆ. ಆದ್ದರಿಂದ ಗಿಲ್ ಸಹೋದರರ ಮನೆಯ ಆವರಣ ಈಗ ಸಾಮಾಜಿಕ ಜಿಮ್ ಆಗಿಯೂ ಪರಿವರ್ತನೆಗೊಂಡಿದೆ. ಪ್ರಭುಶುಖನ್ ಜೊತೆ ಇಂಡಿಯನ್ ಆ್ಯರೋಸ್ ಕ್ಲಬ್‌ನಲ್ಲಿ ಅಡಿದ್ದ ವಿಕ್ರಂ ಪ್ರತಾಪ್ ಸಿಂಗ್, ನರೇಂದ್ರ ಗೆಹ್ಲೋಟ್‌, ದೀಪಕ್ ತಾಂಗ್ರಿ ಮತ್ತು ಗುರುಕೀರತ್ ಸಿಂಗ್ ಅವರಿಗೂ ಈ ಹೋಮ್ ಮೇಡ್ ಜಿಮ್ ಈಗ ಫಿಟ್‌ನೆಸ್ ಸೆಂಟರ್.

ADVERTISEMENT

ಹಾಕಿ ಕುಟುಂಬದ ಕುಡಿಗಳು

ಪ್ರಭುಶುಖನ್ ಮತ್ತು ಗುರುಸಿಮ್ರತ್ ಅವರ ತಂದೆ ಹಾಗೂ ಮಾವ ಹಾಕಿ ಆಟಗಾರರು. ಗುರುಸಿಮ್ರತ್ ಫುಟ್‌ಬಾಲ್ ಕಡೆಗೆ ಆಕರ್ಷಿತರಾಗಿ ಚಂಡೀಗಢ ಫುಟ್‌ಬಾಲ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿದರು. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್) ಅಧಿಕಾರಿಗಳ ಕಣ್ಣಿಗೆ ಬಿದ್ದ ಅವರು ನವಿ ಮುಂಬೈಯಲ್ಲಿರುವ ಫೆಡರೇಷನ್‌ನ ಪ್ರಾದೇಶಿಕ ಅಕಾಡೆಮಿಯಲ್ಲಿ ತರಬೇತಿಗೆ ಅವಕಾಶ ಪಡೆದುಕೊಂಡರು. ಅಲ್ಲಿಂದ ಅವರ ಬದುಕು ತಿರುವು ಪಡೆದುಕೊಂಡಿತು. 19 ವರ್ಷದೊಳಗಿನವರ ರಾಷ್ಟ್ರೀಯ ತಂಡದಲ್ಲಿ ಆಡಿದ ಅವರು ಮೊದಲ ಬಾರಿ ವೃತ್ತಿಪರ ಫುಟ್‌ಬಾಲ್ ಆಡಿದ್ದು ಬೆಂಗಳೂರು ಫುಟ್‌ಬಾಲ್ ಕ್ಲಬ್‌ನಲ್ಲಿ (ಬಿಎಫ್‌ಸಿ). ಒಂದು ವರ್ಷ ಕ್ಲಬ್‌ನಲ್ಲಿದ್ದ ಅವರಿಗೆ ಕಣಕ್ಕೆ ಇಳಿಯಲು ಸಿಕ್ಕಿದ್ದು ಒಂದು ಪಂದ್ಯ ಮಾತ್ರ. ಮುಂದಿನ ವರ್ಷ ಅವರು ನಾರ್ತ್ ಈಸ್ಟ್ ಯುನೈಟೆಡ್ ಕ್ಲಬ್ ಸೇರಿದರು. ಆದರೆ ಒಂದೇ ವರ್ಷದಲ್ಲಿ ಬಿಎಫ್‌ಸಿಗೆ ವಾಪಸಾದರು.

ಅಣ್ಣನ ಹಾದಿಯಲ್ಲೇ ಹೆಜ್ಜೆ ಹಾಕಿದ ಪ್ರಭುಶುಖನ್ 17 ವರ್ಷದೊಳಗಿನವರ ಭಾರತ ತಂಡದಲ್ಲಿ ಮಿಂಚಿದವರು. 2017ರಲ್ಲಿ 17 ವರ್ಷದೊಳಗಿನವರ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಇಂಡಿಯನ್ ಆ್ಯರೋಸ್‌ನಲ್ಲಿ ವೃತ್ತಿಪರ ಕಣಕ್ಕೆ ಇಳಿದ ಅವರು ಕಳೆದ ವರ್ಷ ಬಿಎಫ್‌ಸಿ ಪರವಾಗಿ ಎರಡು ಪಂದ್ಯಗಳಲ್ಲಿ ಗೋಲ್‌ಕೀಪಿಂಗ್ ಮಾಡಿದ ಅವರು ಈ ಬಾರಿ ಕೇರಳ ಬ್ಲಾಸ್ಟರ್ಸ್ ಸೇರಿದ್ದಾರೆ.

‘ಕೊರೊನಾ ಹಾವಳಿಯಿಂದ ಉಂಟಾಗಿರುವ ವಿಷಮ ಸ್ಥಿತಿ ಬೇಗನೇ ಕೊನೆಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳದೇ ಇರುವುದರಿಂದ ಸ್ವಂತ ಜಿಮ್ ನಿರ್ಮಿಸಲು ಸಿದ್ಧರಾದೆವು. ಸುಮಾರು 200 ಕೆಜಿ ತೂಕದ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು ನಾವೇ ಜೋಡಿಸಿದೆವು. ರಾಡ್‌ಗಳು, ಪ್ಲೇಟ್‌ಗಳು, ಡಂಬೆಲ್‌ಗಳು, ಮೆಡಿಸಿನ್ ಬಾಲ್‌ಗಳು, ರೆಸಿಸ್ಟನ್ಸ್ ಬ್ಯಾಂಡ್‌ಗಳು ಮತ್ತು ಕೋನ್‌ಗಳು ಇವುಗಳಲ್ಲಿ ಸೇರಿವೆ. ಜಿಮ್ ಸಿದ್ಧಪಡಿಸುವ ಮೂಲಕ ಇರುವ ಪರಿಸ್ಥಿತಿಯಲ್ಲೇ ಫಿಟ್‌ನೆಸ್ ಕಾಯ್ದುಕೊಳ್ಳಲು ಬೇಕಾದ ಸೌಲಭ್ಯ ನಿರ್ಮಿಸಿದೆವು’ ಎಂದು ಸಹೋದರರು ಹೇಳಿದರು.

‘ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡೇ ಗೆಳೆಯರಿಗೂ ಊರಿನ ಇತರ ಕ್ರೀಡಾಪಟುಗಳಿಗೂ ಅವಕಾಶ ನೀಡುತ್ತಿದ್ದೇವೆ. ಸ್ಯಾನಿಟೈಸೇಷನ್ ಮತ್ತು ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆ ಇಲ್ಲಿಯೂ ನಡೆಯುತ್ತಿದೆ. ಫುಟ್‌ಬಾಲ್ ಆಟಗಾರರು ಮಾತ್ರವಲ್ಲದೆ ಕುಸ್ತಿಪಟುಗಳು ಮತ್ತು ಅಥ್ಲೀಟ್‌ಗಳು ಕೂಡ ಸೇರುವುದರಿಂದ ನಮ್ಮ ಮನೆ ಆವರಣ ಈಗ ಕ್ರೀಡಾಪಟುಗಳ ಶಿಬಿರದಂತಾಗಿದೆ’ ಎಂದು ಗುರುಸಿಮ್ರತ್ ಸಿಂಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.