ADVERTISEMENT

ಐ ಲೀಗ್‌ ಮುಗಿಸಲು ಹುನ್ನಾರ: ಕ್ಲಬ್‌ ಮಾಲೀಕರ ಆಕ್ರೋಶ

ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡದಿರುವುದಕ್ಕೆ ಆಕ್ರೋಶ

ಪಿಟಿಐ
Published 23 ಡಿಸೆಂಬರ್ 2018, 17:36 IST
Last Updated 23 ಡಿಸೆಂಬರ್ 2018, 17:36 IST
i league
i league   

ನವದೆಹಲಿ: ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಎರಡನೇ ಲೆಗ್‌ನ 61 ಪಂದ್ಯಗಳ ಪೈಕಿ ಆಯ್ದ 30 ಪಂದ್ಯಗಳನ್ನು ಮಾತ್ರ ನೇರ ಪ್ರಸಾರ ಮಾಡಲು ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ನಿರ್ಧರಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯು ಐ ಲೀಗ್‌ ಅನ್ನು ಮುಗಿಸಲು ಮುಂದಾಗಿದೆ ಎಂದು ಕ್ಲಬ್‌ನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ನಡೆಸಲು ಉದ್ದೇಶಿಸಿರುವ 110 ಪಂದ್ಯಗಳನ್ನೂ ನೇರ ‍ಪ್ರಸಾರ ಮಾಡುವುದಾಗಿ ಲೀಗ್‌ ಆರಂಭಕ್ಕೂ ಮುನ್ನ ವಾಹಿನಿ ತಿಳಿಸಿತ್ತು. ಆದರೆ ಈಗ ಸ್ಟಾರ್‌ ನೆಟ್‌ವರ್ಕ್‌ ಮಾತು ಬದಲಿಸಿದೆ. 80 ಪಂದ್ಯಗಳನ್ನಷ್ಟೇ ಪ್ರಸಾರ ಮಾಡುವುದಾಗಿ ಹೇಳುತ್ತಿದೆ.

ADVERTISEMENT

ಮಿನರ್ವ ಪಂಜಾಬ್‌ ಎಫ್‌ಸಿ, ಮೋಹನ್‌ ಬಾಗನ್‌, ಈಸ್ಟ್‌ ಬೆಂಗಾಲ್‌, ರಿಯಲ್‌ ಕಾಶ್ಮೀರ್‌ ಎಫ್‌ಸಿ ಮತ್ತು ಚೆನ್ನೈ ಸಿಟಿ ಎಫ್‌ಸಿ ಕ್ಲಬ್‌ಗಳು ಸ್ಟಾರ್‌ ವಾಹಿನಿಯ ನಿರ್ಧಾರವನ್ನು ಖಂಡಿಸಿವೆ.

‘ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ರಿಲಯನ್ಸ್‌ ಒಡೆತನದ ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ ಸಂಸ್ಥೆಗಳು ಐ ಲೀಗ್‌ ಅನ್ನು ನಾಶಪಡಿಸಲು ಮುಂದಾಗಿವೆ. ಪಂದ್ಯಗಳ ಪ್ರಸಾರವನ್ನು ಕಡಿತಗೊಳಿಸಿರುವುದರ ಹಿಂದಿನ ಮರ್ಮ ಏನೆಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಸ್ಟಾರ್‌ ವಾಹಿನಿಯ ನಡೆ ಖಂಡನಾರ್ಹ. ಇದರ ವಿರುದ್ಧ ಎಲ್ಲಾ ಕ್ಲಬ್‌ಗಳು ಧ್ವನಿ ಎತ್ತಬೇಕು’ ಎಂದು ಮಿನರ್ವ ಪಂಜಾಬ್‌ ಕ್ಲಬ್‌ನ ಮಾಲೀಕ ರಂಜಿತ್‌ ಬಜಾಜ್‌ ಕರೆ ನೀಡಿದ್ದಾರೆ.

‘ಐ ಲೀಗ್‌ ನಡೆಸಲು ಮನಸಿಲ್ಲದಿದ್ದರೇ ನಿಲ್ಲಿಸಿಬಿಡಿ. ಪಂದ್ಯಗಳನ್ನು ನೇರ ಪ್ರಸಾರ ಮಾಡದಿದ್ದರೆ ಎಲ್ಲರಿಗೂ ನಷ್ಟವಾಗುತ್ತದೆ. ಅಭಿಮಾನಿಗಳಿಗೂ ನಿರಾಸೆಯಾಗುತ್ತದೆ. ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆಯೋಜಿಸುತ್ತಿರುವುದರ ಬಗ್ಗೆ ನಮಗೆ ಯಾವ ತಕರಾರೂ ಇಲ್ಲ. ಆದರೆ ಐ ಲೀಗ್‌ ಅನ್ನು ನಾಶ ಮಾಡಲು ಮುಂದಾದರೆ ಸುಮ್ಮನಿರುವುದಿಲ್ಲ’ ಎಂದು ಚೆನ್ನೈ ಸಿಟಿ ಎಫ್‌ಸಿ ತಂಡದ ಮಾಲೀಕ ರೋಹಿತ್ ರಮೇಶ್‌ ಎಚ್ಚರಿಸಿದ್ದಾರೆ.

‘ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಪರಿಶ್ರಮದಿಂದ ಐ ಲೀಗ್ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಹೇಳಿದಂತೆ ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡಲು ಸ್ಟಾರ್‌ ವಾಹಿನಿ ಮುಂದಾಗಬೇಕು. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ’ ಎಂದು ರಿಯಲ್‌ ಕಾಶ್ಮೀರ್‌ ಎಫ್‌ಸಿ ತಂಡದ ಸಹ ಮಾಲೀಕ ಸಂದೀಪ್‌ ಚಾಟೋ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.