ಕೋಲ್ಕತ್ತ: ನಾಯಕ ಸುನಿಲ್ ಚೆಟ್ರಿ ಅವರ ಕಾಲ್ಚಳಕದ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲಲ್ಲಿ ಜಯಿಸಿತು.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿಯು 2–1ರಿಂದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ಎದುರು ಜಯಿಸಿತು.
ಮೊದಲಾರ್ಧದಲ್ಲಿ ಮೊಹಮ್ಮಡನ್ ಸ್ಪೋರ್ಟಿಂಗ್ 1–0 ಮುನ್ನಡೆಯಲ್ಲಿತ್ತು. 8ನೇ ನಿಮಿಷದಲ್ಲಿಯೇ ಲಾಬಿ ಮಂಝೋಕಿ ಗೋಲು ಗಳಿಸಿದ್ದರು.
ದ್ವಿತಿಯಾರ್ಧದಲ್ಲಿ ಬಹುತೇಕ ಸಮಯದವರೆಗೂ ಬೆಂಗಳೂರು ತಂಡಕ್ಕೆ ಗೋಲು ಹೊಡೆಯಲು ಆತಿಥೇಯರು ಬಿಟ್ಟಿರಲಿಲ್ಲ. ಆದರೆ 82ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆಟ್ರಿ ಗೋಲು ಹೊಡೆದರು. ಇದರಿಂದಾಗಿ 1–1ರ ಸಮಬಲ ಸಾಧ್ಯವಾಯಿತು.
ಅದೃಷ್ಟ ಬಿಎಫ್‌ಸಿಯೊಂದಿಗೆ ಇರುವುದು ಮತ್ತೊಮ್ಮೆ ಸಾಬೀತಾಯಿತು. ಮೊಹಮ್ಮಡನ್ ತಂಡದ ಫ್ಲಾರೆಂಟ್ ಒಗೀರ್ (90+9ನಿ) ಗೋಲಿನ ಉಡುಗೊರೆ ನೀಡಿದರು. ಇದರಿಂದಾಗಿ ಬೆಂಗಳೂರು ಜಯವು ಸುಲಭವಾಯಿತು.
ಈ ಜಯದೊಂದಿಗೆ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 9 ಪಂದ್ಯಗಳನ್ನು ಆಡಿರುವ ತಂಡವು 6ರಲ್ಲಿ ಗೆದ್ದಿದೆ. ಒಂದು ಸೋತು ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಇದರಿಂದಾಗಿ ಒಟ್ಟು 20 ಅಂಕಗಳನ್ನು ಗಳಿಸಿದೆ.
ಮೊಹಮ್ಮಡನ್ ತಂಡದ ಕಾಸಿಮೊವ್, ಇರ್ಷಾದ್ ಹಾಗೂ ಮಂಝೋಕಿ ಹಳದಿಕಾರ್ಡ್ ದರ್ಶನ ಮಾಡಿದರು. ಬಿಎಫ್‌ಸಿಯ ಎ. ನಾಗ್ವೆರಾ ಮತ್ತು ರಾಹುಲ್ ಭೆಕೆ ಅವರಿಗೂ ರೆಫರಿ ಹಳದಿ ಕಾರ್ಡ್ ದರ್ಶನ ಮಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.