ADVERTISEMENT

ಐಸ್‌ಲ್ಯಾಂಡ್‌ಗೆ ಸವಾಲಾಗಬಲ್ಲದೇ ನೈಜೀರಿಯಾ?

ಡಿ ಗುಂಪಿನ ಪಂದ್ಯ: ಜಾನ್‌ ಓಬಿ ಮೈಕೆಲ್‌ ಪಡೆಗೆ ಮಾಡು ಇಲ್ಲವೆ ಮಡಿ ಪಂದ್ಯ

ಏಜೆನ್ಸೀಸ್
Published 21 ಜೂನ್ 2018, 17:55 IST
Last Updated 21 ಜೂನ್ 2018, 17:55 IST
ಐಸ್‌ಲ್ಯಾಂಡ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು. –ರಾಯಿಟರ್ಸ್‌ ಚಿತ್ರ
ಐಸ್‌ಲ್ಯಾಂಡ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು. –ರಾಯಿಟರ್ಸ್‌ ಚಿತ್ರ   

ಗೆಲೆಂಡ್‌ಜಿಕ್‌, ರಷ್ಯಾ: ಬಲಿಷ್ಠ ಅರ್ಜೆಂಟೀನಾ ತಂಡದೊಂದಿಗಿನ ಪಂದ್ಯವನ್ನು ಡ್ರಾ ಮಾಡಿಕೊಂಡ ಐಸ್‌ಲ್ಯಾಂಡ್‌ ಈಗ ವಿಶ್ವಾಸದಲ್ಲಿದೆ. ಶುಕ್ರವಾರ ವೋಲ್ಗಾಗ್ರ್ಯಾದ್‌ ಅರೆನಾದಲ್ಲಿ ನಡೆಯುವ ಡಿ ಗುಂಪಿನ ಪಂದ್ಯದಲ್ಲಿ ನೈಜೀರಿಯಾ ತಂಡವನ್ನು ಐಸ್‌ಲ್ಯಾಂಡ್‌ ಎದುರಿಸಲಿದೆ.

ಅರ್ಜೆಂಟೀನಾ ವಿರುದ್ದದ ತನ್ನ ಮೊದಲ ಪಂದ್ಯದಲ್ಲಿ ಐತಿಹಾಸಿಕ ಡ್ರಾ ಸಾಧಿಸಿದ್ದ ಐಸ್‌ಲ್ಯಾಂಡ್‌ ಪಡೆಯು ಎಲ್ಲ ದೃಷ್ಠಿಯಿಂದಲೂ ನೈಜೀರಿಯಾ ತಂಡಕ್ಕಿಂತ ಶಕ್ತವಾಗಿದೆ.

ಅದು ಅಲ್ಲದೇ ಪ್ರಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಬೇಕೆಂರೆ ಈ ಪಂದ್ಯವನ್ನು ಐಸ್‌ಲ್ಯಾಂಡ್‌ ಗೆಲ್ಲಬೇಕಿದೆ. ಇಲ್ಲದಿದ್ದರೆ ಅದರ ಮುಂದಿನ ಹಾದಿ ಕಠಿಣವಾಗುವ ಸಾಧ್ಯತೆ ಹೆಚ್ಚು.

ADVERTISEMENT

ಇನ್ನೂ, ತನ್ನ ಮೊದಲ ಪಂದ್ಯದಲ್ಲಿ ಕ್ರೊವೇಷ್ಯಾ ವಿರುದ್ಧ 2–0 ಗೋಲುಗಳಿಂದ ಸೋತ ನೈಜೀರಿಯಾಗೆ ಇದು ಮಾಡು ಇಲ್ಲವೆ ಮಡಿ ಪಂದ್ಯ. ಯುವ ಆಟಗಾರರೇ ಹೆಚ್ಚಾಗಿರುವ ಜಾನ್‌ ಓಬಿ ಮೈಕಲ್‌ ನಾಯಕತ್ವದ ಪಡೆ ಹಿಂದಿನ ಪಂದ್ಯಗಳಲ್ಲಿ ಹಲವು ತಪ್ಪುಗಳನ್ನು ಮಾಡಿತ್ತು.

ವಿಶ್ವಕಪ್‌ ಆಡಲು ಅರ್ಹತೆ ಪಡೆದ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಐಸ್‌ಲ್ಯಾಂಡ್‌ ತಂಡದ ರಕ್ಷಣಾ ಹಾಗೂ ಮಿಡ್‌ಫೀಲ್ಡ್‌ ವಿಭಾಗಗಳು ಶಕ್ತವಾಗಿದೆ. ಅರ್ಜೆಂಟೀನಾದ ಶ್ರೇಷ್ಠ ಮುಂಚೂಣಿ ವಿಭಾಗದ ಆಟಗಾರರು ಗೋಲು ಗಳಿಸಲು ಪರದಾಡುವಂತೆ ಮಾಡಿದ ಈ ತಂಡದ ರಕ್ಷಣಾ ವಿಭಾಗದ ಆಟಗಾರರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಭುಜದ ಗಾಯಕ್ಕೊಳಗಾಗಿರುವ ಜೋಹನ್‌ ಬರ್ಗ್‌ ಗುಡ್‌ಮುಂಡ್ಸನ್‌ ಅವರು ಈ ಪಂದ್ಯದಲ್ಲಿ ಆಡುವುದು ಅನುಮಾನ. ಅಲ್‌ಫ್ರೆಡ್‌ ಫಿನ್‌ಬೊಗಾಸನ್‌ ಅವರು ಈ ಪಂದ್ಯದ ಪ್ರಮುಖ ಆಕರ್ಷಣೆ. ಕಳೆದ ಮೂರು ಪಂದ್ಯಗಳಲ್ಲಿ ಅವರು ಗೋಲು ಗಳಿಸಿ ಫುಟ್‌ಬಾಲ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ.

ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಸೇರಿಸಿದ್ದ ನೈಜೀರಿಯಾದ ಒಜೆನೆಕಾರೊ ಇಟೆಬೊ ಅವರ ಬದಲಿಗೆ ಉಪನಾಯಕ ಓಗೆನಿ ಒನಾಜಿ ಅವರಿಗೆ ಈ ಪಂದ್ಯದಲ್ಲಿ ಸ್ಥಾನ ದೊರೆಯುವ ಸಂಭವವಿದೆ.

ಮುಂಚೂಣಿ ವಿಭಾಗದ ಅಹ್ಮದ್‌ ಮುಸಾ ಅವರು ಗೋಲು ಗಳಿಸುವ ಈ ತಂಡದ ಪ್ರಮುಖ ಆಟಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.