ADVERTISEMENT

ಫುಟ್‌ಬಾಲ್‌: ಭಾರತಕ್ಕೆ ಮುಳುವಾದ ಫ್ರೀ ಗೋಲು

ಭಾರತದ ಪರ ಗೋಲು ಗಳಿಸಿದ ನಿಶುಕುಮಾರ್‌; ಫ್ರೀ ಗೋಲು ಮೂಲಕ ಮಿಂಚಿದ ಅಮೀರ್ ಶಫಿ

ಪಿಟಿಐ
Published 18 ನವೆಂಬರ್ 2018, 20:33 IST
Last Updated 18 ನವೆಂಬರ್ 2018, 20:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮಾನ್‌: ಗಾಯಗೊಂಡಿರುವ ಸುನಿಲ್ ಚೆಟ್ರಿ ಅವರ ಅನುಪಸ್ಥಿತಿಯಲ್ಲಿ ಅಂಗಣಕ್ಕೆ ಇಳಿದ ಭಾರತ ಫುಟ್‌ಬಾಲ್ ತಂಡ ನಿರಾಸೆಗೆ ಒಳಗಾಯಿತು. ಜೋರ್ಡನ್‌ ಎದುರು ಕಿಂಗ್‌ ಅಬ್ದುಲ್ಲ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 1–2ರಿಂದ ಸೋತಿತು.

ನವದೆಹಲಿಯಿಂದ ವಿಮಾನದಲ್ಲಿ ಹೊರಟ ಭಾರತ ತಂಡದವರು ಹವಾಮಾನ ವೈಪರೀತ್ಯದಿಂದಾಗಿ ಕುವೈತ್ ವಿಮಾನ ನಿಲ್ದಾಣದಲ್ಲಿ ತಾಸುಗಟ್ಟಲೆ ಕಾದು ಸುಸ್ತಾಗಿ ಇಲ್ಲಿಗೆ ಬಂದಿದ್ದರು. ಫಿಫಾ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿರುವ ಭಾರತ, 112ನೇ ಸ್ಥಾನದಲ್ಲಿರುವ ಎದುರಾಳಿಗಳ ವಿರುದ್ಧ ವಿಶ್ವಾಸದಿಂದಲೇ ಆಡಲು ಇಳಿದಿತ್ತು.

ಆದರೆ ಮೊದಲಾರ್ಧದಲ್ಲೇ ಎದುರಾಳಿಗಳು ಭಾರತದ ನಿರೀಕ್ಷೆಗೆ ತಣ್ಣೀರು ಸುರಿದರು. 25ನೇ ನಿಮಿಷದಲ್ಲಿ ನಾಯಕ ಹಾಗೂ ಗೋಲ್‌ಕೀಪರ್‌ ಅಮೀರ್ ಶಫಿ ‘ಫ್ರೀ ಗೋಲು’ ಮೂಲಕ ಜೋರ್ಡನ್‌ಗೆ ಮುನ್ನಡೆ ತಂದುಕೊಟ್ಟರು.

ADVERTISEMENT

ಶಫಿ ಆಚೆ ತುದಿಯಿಂದ ಒದ್ದ ಚೆಂಡು ನೇರವಾಗಿ ಭಾರತದ ಗೋಲು ಪೆಟ್ಟಿಗೆಯತ್ತ ಸಾಗಿತು. ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್ ಸಂಧು ತಡೆಯಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಚೆಂಡು ಗೋಲುಪೆಟ್ಟಿಗೆಯೊಳಗೆ ಸೇರಿದಾಗ ಆತಿಥೇಯರ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತು. 10ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಪೆನಾಲ್ಟಿ ಮೂಲಕ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಅದನ್ನು ಗುರುಪ್ರೀತ್ ಸಿಂಗ್ ಸಂಧು ತಡೆದಿದ್ದರು.

0–1ರ ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಭಾರತ ದ್ವಿತೀಯಾರ್ಧದಲ್ಲೂ ಪರಿಣಾಮಕಾರಿ ಆಟವಾಡಲಿಲ್ಲ. 58ನೇ ನಿಮಿಷದಲ್ಲಿ ಎಹ್ಸನ್‌ ಹಡಾದ್‌ ಮೋಹಕ ಗೋಲು ಗಳಿಸಿ ಜೋರ್ಡನ್‌ನ ಮುನ್ನಡೆಯನ್ನು ಹೆಚ್ಚಿಸಿದರು.

ಭಾರತ ಪಾಳಯದಲ್ಲಿ ಜಾಕಿಚಾಂದ್‌ ಸಿಂಗ್ ಅವರ ಬದಲಿಗೆ ಕಣಕ್ಕೆ ಇಳಿದ ನಿಶುಕುಮಾರ್‌ 61ನೇ ನಿಮಿಷದಲ್ಲಿ ಗೋಲು ಗಳಿಸಿ ನಿರೀಕ್ಷೆ ಮೂಡಿಸಿದರು. ಆದರೆ ತಂಡದ ಪ್ರಯತ್ನಗಳನ್ನು ಜೋರ್ಡನ್‌ ಆಟಗಾರರು ವಿಫಲಗೊಳಿಸಿ ಗೆಲುವು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.