ADVERTISEMENT

ಫುಟ್‌ಬಾಲ್: ಹೊಸಬರ ನಿರೀಕ್ಷೆ?

ವಿಕ್ರಂ ಕಾಂತಿಕೆರೆ
Published 1 ಡಿಸೆಂಬರ್ 2019, 19:30 IST
Last Updated 1 ಡಿಸೆಂಬರ್ 2019, 19:30 IST
ಫಾರೂಕ್ ಚೌಧರಿ, ರೆಡೀಮ್ ತ್ಲಾಂಗ್, ಅನಿರುದ್ಧ ತಾಪ
ಫಾರೂಕ್ ಚೌಧರಿ, ರೆಡೀಮ್ ತ್ಲಾಂಗ್, ಅನಿರುದ್ಧ ತಾಪ   

ಭಾರತ ಫುಟ್‌ಬಾಲ್ ಇದೀಗ ಕವಲು ದಾರಿಯಲ್ಲಿದೆ. ಹಿರಿಯ ಆಟಗಾರರ ಪೈಕಿ ಕೆಲ ಪ್ರಮುಖರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅನುಭವಿಗಳು ಗೋಲು ಗಳಿಸಲು ವಿಫಲರಾಗುತ್ತಿದ್ದಾರೆ. ಈ ನಡುವೆ ಐಎಸ್‌ಎಲ್‌ನಲ್ಲಿ ಯುವ ಪ್ರತಿಭೆಗಳು ಬೆಳಗುತ್ತಿರುವುದರಿಂದ ಭರವಸೆ ಮೂಡಿದೆ. ತಂಡ ಹೊಸ ಮಾರ್ಗದಲ್ಲಿ ಹೆಜ್ಜೆ ಹಾಕಲು ಇದು ನೆರವಾಗುವುದೇ...?

ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರ ಬದಲಿಗೆ ತಂಡದಲ್ಲಿ ಆಡುವ ಆಟಗಾರ ಯಾರು...? ಇತ್ತೀಚೆಗೆ ಈ ಪ್ರಶ್ನೆ ಫುಟ್‌ಬಾಲ್ ವಲಯದಲ್ಲಿ ಮೂಡಿಬಂದಿತ್ತು. ಅದಕ್ಕೆ ಕಾರವೂ ಇತ್ತು. ಸುನಿಲ್ ಚೆಟ್ರಿ ಈಚೆಗೆ ಕಾಲ್ಚಳಕ ತೋರಲು ವಿಫಲರಾಗಿದ್ದರು. ಗೋಲು ಗಳಿಸುವ ಮಾಂತ್ರಿಕ ಪ್ರಮುಖ ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. ಹೀಗಾಗಿ ಭಾರತ ತಂಡವು ನವೆಂಬರ್ 19ರಂದು ನಡೆದಿದ್ದ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ 5ನೇ ಪಂದ್ಯದಲ್ಲೇ ಹೊರಬಿದ್ದಿತ್ತು. ಈ ಪಂದ್ಯದ ನಂತರ, ಚೆಟ್ರಿ ನಿವೃತ್ತಿ ಬಗ್ಗೆ ಗುಸು ಗುಸು ಎದ್ದಿತ್ತು.

ಚೆಟ್ರಿ ಅವರ ಕುರಿತು ಸಂದೇಹ ವ್ಯಕ್ತಪಡಿಸಿದವರಿಗೆ ತಂಡದ ಕೋಚ್ ಇಗೊರ್ ಸ್ಟಿಮ್ಯಾಚ್ ತಕ್ಕ ಉತ್ತರ ನೀಡಿದ್ದಾರೆ. ‘ಚೆಟ್ರಿ ಅವರಿಗೆ ವಯಸ್ಸು 30 ದಾಟಿದೆ ನಿಜ. ಆದರೆ ಅವರಿನ್ನೂ ಯುವಕರಂತೆ ಆಡುತ್ತಿದ್ದಾರೆ. ಆದ್ದರಿಂದ ಸದ್ಯ ಅವರಿಗೆ ಬದಲಿ ಆಟಗಾರನನ್ನು ಹುಡುಕುವ ಅಗತ್ಯವೇ ಇಲ್ಲ’ ಎಂದಿದ್ದರು.

ADVERTISEMENT

ಆದರೂ ಸ್ಟಿಮ್ಯಾಚ್ ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆಯೇ...? ಈ ಪ್ರಶ್ನೆಗೆ ಉತ್ತರ ಎಂಬಂತೆ, ನವೆಂಬರ್ 19ರ ನಿರ್ಣಾಯಕ ಪಂದ್ಯದಲ್ಲಿ ಅಚ್ಚರಿಯ ನಡೆಗೆ ಮುಂದಾಗಿದ್ದರು. ಈ ಪಂದ್ಯದಲ್ಲಿ ಫಾರೂಕ್ ಚೌಧರಿ ಮತ್ತು ಮನ್ವೀರ್ ಸಿಂಗ್‌ಗೆ ಅವಕಾಶ ನೀಡಿ ಕುತೂಹಲ ಮೂಡಿಸಿದ್ದರು. ಕೇವಲ 5 ಪಂದ್ಯಗಳನ್ನು ಆಡಿದ ಅನುಭವ ಇರುವ ಫಾರೂಕ್ ಮತ್ತು 14 ಪಂದ್ಯಗಳಲ್ಲಿ 3 ಗೋಲುಗಳನ್ನು ಮಾತ್ರ ಗಳಿಸಿದ್ದ ಮನ್ವೀರ್‌ ಅವರ ಮೇಲೆ ವಿಶ್ವಾಸವಿರಿಸಿದ್ದ ಕೋಚ್‌ಗೆ ನಿರೀಕ್ಷಿತ ಫಲ ದೊರಕಲಿಲ್ಲ.

ಐಎಸ್‌ಎಲ್‌ನಲ್ಲಿ ತೋರಿದ ಸಾಮರ್ಥ್ಯ ಇವರಿಬ್ಬರು ರಾಷ್ಟ್ರೀಯ ತಂಡದ ಕೋಚ್‌ ಗಮನಕ್ಕೆ ಬರಲು ಕಾರಣವಾಯಿತು. ಜೆಮ್‌ಶೆಡ್‌ಪುರ ಪರ ಆಡುತ್ತಿರುವ ಫಾರೂಕ್ ಮತ್ತು ಗೋವಾ ತಂಡದಲ್ಲಿ ಆಡುತ್ತಿರುವ ಮನ್ವೀರ್ ಮಿಂಚಿದ್ದಾರೆ. ಇಬ್ಬರೂ ತಲಾ ಒಂದೊಂದು ಗೋಲು ಮಾತ್ರ ಗಳಿಸಿದ್ದರೂ ಪಾಸ್‌ಗಳು, ಶಾಟ್‌ಗಳು ಮತ್ತು ಕ್ರಾಸ್‌ಗಳಲ್ಲಿ ಚುರುಕಿನ ಆಟವಾಡಿ ಗಮನ ಸೆಳೆದಿದ್ದಾರೆ.

ಇವರಿಬ್ಬರೊಂದಿಗೆ ರಿಡೀಮ್ ತ್ಲಾಂಗ್ ಮತ್ತು ಜೆಸೆಲ್ ಕಾರ್ನೆರೊ ಮೇಲೆಯೂ ಸ್ಟಿಮ್ಯಾಚ್ ಗಮನ ಇರಿಸಿದ್ದಾರೆ. ನಾರ್ತ್ ಈಸ್ಟ್‌ ಯುನೈಟೆಡ್‌ನಲ್ಲಿ ಆಡುತ್ತಿರುವ ಮಿಡ್‌ಫೀಲ್ಡರ್ ತ್ಲಾಂಗ್ ಚುರುಕಿನ ಪಾದಚಲನೆಯ ಮೂಲಕ ಫುಟ್‌ಬಾಲ್ ಪ್ರಿಯರ ಮನಕ್ಕೆ ಲಗ್ಗೆ ಇರಿಸಿದ್ದಾರೆ. ಈಗಾಗಲೇ 2 ಗೋಲುಗಳನ್ನೂ ಗಳಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್‌ನ ಡಿಫೆಂಡರ್ ಜೆಸೆಲ್ 9 ಟ್ಯಾಕ್ಲಿಂಗ್‌ಗಳನ್ನು ಮಾಡಿದ್ದಾರೆ. ರೆಡೀಮ್ ಕಳೆದ ಬಾರಿ 19 ಪಂದ್ಯಗಳನ್ನು ಆಡಿದ್ದರೂ ಗಳಿಸಿದ್ದು 1 ಗೋಲು ಮಾತ್ರ. ಈ ಬಾರಿ ಐದೇ ಪಂದ್ಯಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡಕ್ಕೆ ಆಸರೆಯಾದದ್ದು ಜೆಸೆಲ್ ಅವರ ಮೇಲೆ ಕಣ್ಣು ಬೀಳಲು ಕಾರಣವಾಗಿತ್ತು.

ಅನಿರುದ್ಧ ತಾಪ ಮತ್ತು ಅಬ್ದುಲ್ ಸಮದ್ ಅವರೂ ರಾಷ್ಟ್ರೀಯ ತಂಡದಲ್ಲಿ ಬೆಳಗುವ ಭರವಸೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.