
ಫುಟ್‌ಬಾಲ್
ಬೆಂಗಳೂರು: ನಾಯಕ ಸುನಿಲ್ ಚೆಟ್ರಿ ಹಾಗೂ ಫಾರ್ವರ್ಡ್ ಶಿವಶಕ್ತಿ ನಾರಾಯಣ್ ಗಳಿಸಿದ ತಲಾ ಒಂದು ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಭಾನುವಾರ 2–0ಯಿಂದ ಸ್ಪೋರ್ಟಿಂಗ್ ಕ್ಲಬ್ ದೆಹಲಿ ತಂಡವನ್ನು ಸೋಲಿಸಿತು. ಅದರೊಂದಿಗೆ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಕಂಠೀರವ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿಯಂದು ಕಿಕ್ಕಿರಿದಿದ್ದ ಪ್ರೇಕ್ಷಕರನ್ನು ಶಿವ ಹಾಗೂ ಚೆಟ್ರಿ ರಂಜಿಸಿದರು. ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (45+1ನೇ ನಿ.) ಗೋಲು ಗಳಿಸಿದ ಶಿವಶಕ್ತಿ, ಆತಿಥೇಯ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.
ಅನುಭವಿ ಆಟಗಾರ ಚೆಟ್ರಿ,78ನೇ ನಿಮಿಷದಲ್ಲಿ ಮೈದಾನಕ್ಕಿಳಿದರು. ಕೊನೆಯ ಕ್ಷಣದಲ್ಲಿ ಕಾಲ್ಚಳಕ ತೋರಿ ಅಭಿಮಾನಿಗಳ ಶಿಳ್ಳೆ–ಚಪ್ಪಾಳೆ ಗಿಟ್ಟಿಸಿಕೊಂಡರು. 90+2ನೇ ನಿಮಿಷ ದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಹೊಡೆದಾಗ ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತು. ಐಎಸ್‌ಎಲ್‌ನಲ್ಲಿ ಗೋಲು ದಾಖಲಿಸಿದ ಅತಿ ಹಿರಿಯ ಆಟಗಾರ (41 ವರ್ಷ, 196 ದಿನ) ಎಂಬ ಗೌರವಕ್ಕೂ ಚೆಟ್ರಿ ಪಾತ್ರರಾದರು.
ಕಳೆದ ಆವೃತ್ತಿಯ ರನ್ನರ್ಸ್‌ಅಪ್ ಬಿಎಫ್‌ಸಿ ಆಟಗಾರರು ರಕ್ಷಣಾ ವಿಭಾಗದಲ್ಲಿಯೂ ಚುರುಕುತನ ತೋರಿದರು. ವಿಕೆಟ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ಮಹತ್ವದ ಸೇವ್‌ಗಳೊಂದಿಗೆ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.
17 ವರ್ಷ ವಯಸ್ಸಿನ ಆಟಗಾರ, ಮಣಿಪುರದ ಎನ್. ರಿಷಿ ಸಿಂಗ್ ಅವರು ಪದಾರ್ಪಣೆ ಮಾಡಿದರು.
ತಲಾಲ್ ಮಿಂಚು: ಫ್ರಾನ್ಸ್‌ನ ಆಟಗಾರ
ಮದೀಹ್ ತಲಾಲ್ (9ನೇ ನಿಮಿಷ) ಅವರು ಹೊಡೆದ ಗೋಲಿನ ನೆರವಿನಿಂದ ಜಮ್ಶೆಡ್‌ಪುರ ಫುಟ್‌ಬಾಲ್ ಕ್ಲಬ್ ತಂಡವು ಭಾನುವಾರ 1–0ಯಿಂದ ಮೊಹಮ್ಮಡನ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು.
ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್
ನಲ್ಲಿ ನಡೆದ ಪಂದ್ಯದಲ್ಲಿ ಮದೀಹ್ ಆರಂಭದಲ್ಲಿಯೇ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ನಂತರ ರಕ್ಷಣಾತ್ಮಕ ಆಟದ ಮೊರೆ ಹೋದ ಆತಿಥೇಯ ತಂಡವು, ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡದೆ ಪಂದ್ಯವನ್ನು ಗೆದ್ದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.