ನವದೆಹಲಿ: ಪಂದ್ಯದ ಕೊನೆಯ ಹಂತದಲ್ಲಿ ಲೂಕಾ ಮೆಜೆಸಿನ್ ಗಳಿಸಿದ ಗೋಲಿನಿಂದ ಪಂಜಾಬ್ ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಎದುರು ರೋಚಕ ಜಯ ಸಾಧಿಸಿತು.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 3–2ರಿಂದ ಬೆಂಗಳೂರು ವಿರುದ್ಧ ಗೆದ್ದಿತು.
ಪಂದ್ಯದಲ್ಲಿ ಬೆಂಗಳೂರು ತಂಡವೇ ಗೋಲು ಖಾತೆ ತೆರೆಯಿತು. 49ನೇ ನಿಮಿಷದಲ್ಲಿ ಎಡ್ಗರ್ ಮೆಂಡೇಜ್ ಅವರು ಗೋಲು ಹೊಡೆದು ಬಿಎಫ್‌ಸಿಗೆ 1–0 ಮುನ್ನಡೆ ಒದಗಿಸಿದರು. ಐದು ನಿಮಿಷಗಳ ನಂತರ ತಿರುಗೇಟು ನೀಡಿದ ಪಂಜಾಬ್ ತಂಡದ ಅಸ್ಮಿರ್ ಸುಜಿಚ್ (55ನೇ ನಿ) ಪೆನಾಲ್ಟಿಯನ್ನು ಗೋಲಿನಲ್ಲಿ ಪರಿವರ್ತಿಸಿ ಸಮಬಲ ಸಾಧಿಸಿದರು.
ನಂತರದ ಹೋರಾಟ ಕುತೂಹಲಭರಿತವಾಗಿತ್ತು. ಉಭಯ ತಂಡಗಳ ಜಿದ್ದಾಜಿದ್ದಿ ಮುಗಿಲುಮುಟ್ಟಿತು. ಈ ಹಂತದಲ್ಲಿ ಪಂಜಾಬ್ ತಂಡದ 3 ಆಟಗಾರರು ಹಳದಿ ಕಾರ್ಡ್ ದರ್ಶನ ಮಾಡಿದರು. 79ನೇ ನಿಮಿಷದಲ್ಲಿ ಪಂಜಾಬ್ ತಂಡದ ಫ್ಲಿಪ್ ಮರ್ಝೇಕ್ ಗೋಲು ಹೊಡೆಯುವ ಮೂಲಕ ಬಿಎಫ್‌ಸಿ ರಕ್ಷಣಾ ಪಡೆಗೆ ಪೆಟ್ಟು ಕೊಟ್ಟರು.
ನಂತರದ ತುರುಸಿನ ಹೋರಾಟದಲ್ಲಿ ಬಿಎಫ್‌ಸಿಯ ರಾಹುಲ್ ಭೆಕೆ (90+2) ಗೋಲು ಹೊಡೆದರು. ಇದರಿಂದಾಗಿ 2–2ರ ಸಮಬಲವಾಯಿತು. ಪಂದ್ಯ ಡ್ರಾ ಆಗುವ ಸಾಧ್ಯತೆ ಇತ್ತು.
ಆದರೆ ಲೂಕಾ (90+6ನಿ) ಕಾಲ್ಚಳಕ ಮೆರೆದರು. ಗೋಲು ಹೊಡೆದು ಬಿಎಫ್‌ಸಿಯನ್ನು ಮಣಿಸಿದರು.
ಬೆಂಗಳೂರು ತಂಡಕ್ಕೆ ಇದು 7ನೇ ಸೋಲು. ಒಟ್ಟು 19 ಪಂದ್ಯಗಳನ್ನು ಆಡಿರುವ ತಂಡವು 8 ಜಯ ಮತ್ತು 4 ಡ್ರಾ ಸಾಧಿಸಿದೆ. ಒಟ್ಟು 28 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಪಂಜಾಬ್ ತಂಡವು 17 ಪಂದ್ಯಗಳಲ್ಲಿ 7ರಲ್ಲಿ ಜಯಿಸಿದೆ, 2 ಡ್ರಾ ಸಾಧಿಸಿದೆ. 8ರಲ್ಲಿ ಸೋತಿದೆ. 23 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.