ADVERTISEMENT

ಸೀರಿ ‘ಎ’ ಫುಟ್‌ಬಾಲ್‌ ಟೂರ್ನಿ: ಎರಡನೇ ಸ್ಥಾನಕ್ಕೇರಿದ ಇಂಟರ್‌ ಮಿಲಾನ್‌

ಟೊರಿನೊ ಎದುರು ಜಯ

ಏಜೆನ್ಸೀಸ್
Published 14 ಜುಲೈ 2020, 11:02 IST
Last Updated 14 ಜುಲೈ 2020, 11:02 IST
ಇಂಟರ್‌ ಮಿಲಾನ್‌ ತಂಡದ ಅಲೆಕ್ಸಿಸ್‌ ಸ್ಯಾಂಚೆಸ್‌ (ಎಡ) ಮತ್ತು ಟೊರಿನೊ ತಂಡದ ನಿಕೊಲಸ್‌ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಕ್ಷಣ –ರಾಯಿಟರ್ಸ್‌ ಚಿತ್ರ 
ಇಂಟರ್‌ ಮಿಲಾನ್‌ ತಂಡದ ಅಲೆಕ್ಸಿಸ್‌ ಸ್ಯಾಂಚೆಸ್‌ (ಎಡ) ಮತ್ತು ಟೊರಿನೊ ತಂಡದ ನಿಕೊಲಸ್‌ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಕ್ಷಣ –ರಾಯಿಟರ್ಸ್‌ ಚಿತ್ರ    

ಮಿಲಾನ್‌: ಇಂಟರ್‌ ಮಿಲಾನ್‌ ತಂಡಸೀರಿ ‘ಎ’ ಫುಟ್‌ಬಾಲ್‌ ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಇಂಟರ್‌ ಮಿಲಾನ್‌ 3–1 ಗೋಲುಗಳಿಂದ ಟೊರಿನೊ ತಂಡವನ್ನು ಪರಾಭವಗೊಳಿಸಿತು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 68ಕ್ಕೆ ಹೆಚ್ಚಿಸಿಕೊಂಡಿತು. 32 ಪಂದ್ಯಗಳನ್ನು ಆಡಿರುವ ತಂಡವು 20ರಲ್ಲಿ ಗೆದ್ದಿದೆ.

ADVERTISEMENT

32 ಪಂದ್ಯಗಳಿಂದ 76 ಪಾಯಿಂಟ್ಸ್‌ ಕಲೆಹಾಕಿರುವ ಯುವೆಂಟಸ್‌ ತಂಡ ಅಗ್ರಸ್ಥಾನ ಅಲಂಕರಿಸಿದೆ.

ಪಾಯಿಂಟ್ಸ್‌ ಪಟ್ಟಿಯಲ್ಲಿ 16ನೇ ಸ್ಥಾನ ಹೊಂದಿರುವ ಟೊರಿನೊ ತಂಡ 17ನೇ ನಿಮಿಷದಲ್ಲೇ ಖಾತೆ ತೆರೆದು ಭರವಸೆ ಮೂಡಿಸಿತ್ತು. ಆ್ಯಂಡ್ರೆ ಬೆಲೊಟ್ಟಿ ಗೋಲು ಹೊಡೆದು ಸಂಭ್ರಮಿಸಿದರು.

ನಂತರ ಇಂಟರ್‌ ಮಿಲಾನ್‌ ತಂಡದ ಆಟ ರಂಗೇರಿತು. ಮೊದಲಾರ್ಧದ ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ಈ ತಂಡದ ಆ್ಯಷ್ಲೆ ಯಂಗ್‌ ಕಾಲ್ಚಳಕ ತೋರಿದರು. 48ನೇ ನಿಮಿಷದಲ್ಲಿ ಗೋಲು ಬಾರಿಸಿದ ಯಂಗ್‌ 1–1 ಸಮಬಲಕ್ಕೆ ಕಾರಣರಾದರು.

ವಿರಾಮದ ನಂತರ ಇಂಟರ್‌ ಮಿಲಾನ್‌ ಆಟಗಾರರು ಪ್ರಾಬಲ್ಯ ಮೆರೆದರು. 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದ ಡೀಗೊ ಗೊಡಿನ್‌ ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರು.

ಇದಾಗಿ ಹತ್ತು ನಿಮಿಷಗಳಲ್ಲಿ ತಂಡದ ಖಾತೆಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. 61ನೇ ನಿಮಿಷದಲ್ಲಿ ಲಾಟರೊ ಮಾರ್ಟಿನೆಜ್‌ ಮ್ಯಾಜಿಕ್‌ ಮಾಡಿ ತಂಡದ ಗೆಲುವನ್ನು ಖಾತರಿಪಡಿಸಿದರು. ನಂತರದ ಅವಧಿಯಲ್ಲಿ ಟೊರಿನೊ ತಂಡ ಪುಟಿದೇಳಬಹುದೆಂಬ ನಿರೀಕ್ಷೆ ಹುಸಿಯಾಯಿತು.

‘ಗೆಲುವುಗಳಿಂದ ಆಟಗಾರರ ಆತ್ಮಸ್ಥೈರ್ಯ ಹೆಚ್ಚಲಿದೆ. ಎಲ್ಲರ ಪರಿಶ್ರಮದಿಂದಾಗಿ ಯಶಸ್ಸು ಸಿಕ್ಕಿದೆ. ಅದನ್ನು ಮುಂದುವರಿಸಿಕೊಂಡು ಹೋಗಲು ನಮ್ಮ ಆಟಗಾರರು ಪ್ರಯತ್ನಿಸಲಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಕೆಲ ತಪ್ಪುಗಳನ್ನು ಮಾಡಿ ಕೈಸುಟ್ಟುಕೊಂಡಿದ್ದೆವು. ಅವುಗಳಿಂದ ಪಾಠ ಕಲಿತಿದ್ದೇವೆ’ ಎಂದು ಇಂಟರ್‌ ಮಿಲಾನ್‌ ತಂಡದ ಮುಖ್ಯ ಕೋಚ್ ಆ್ಯಂಟೋನಿಯೊ ಕೊಂಥೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.