ADVERTISEMENT

ISL ಎರಡನೇ ಲೆಗ್‌ ಸೆಮಿಫೈನಲ್ ಇಂದು: ಗೋವಾಕ್ಕೆ ಉತ್ಸಾಹಿ ಬಿಎಫ್‌ಸಿ ಸವಾಲು

ಪಿಟಿಐ
Published 5 ಏಪ್ರಿಲ್ 2025, 23:30 IST
Last Updated 5 ಏಪ್ರಿಲ್ 2025, 23:30 IST
<div class="paragraphs"><p>ಬೆಂಗಳೂರಿನಲ್ಲಿ ಬುಧವಾರ ನಡೆದ ಸೆಮಿಫೈನಲ್‌ ಮೊದಲ ಲೆಗ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಗೋಲು ಗಳಿಸಿದ ವೇಳೆ ಬಿಎಫ್‌ಸಿ ಆಟಗಾರರ ಸಂಭ್ರಮ... </p></div>

ಬೆಂಗಳೂರಿನಲ್ಲಿ ಬುಧವಾರ ನಡೆದ ಸೆಮಿಫೈನಲ್‌ ಮೊದಲ ಲೆಗ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಗೋಲು ಗಳಿಸಿದ ವೇಳೆ ಬಿಎಫ್‌ಸಿ ಆಟಗಾರರ ಸಂಭ್ರಮ...

   

ಪ್ರಜಾವಾಣಿ ಚಿತ್ರ

ಮಡಗಾಂವ್‌: ಉತ್ತಮ ಲಯದ ಜೊತೆಗೆ ಸೆಮಿಫೈನಲ್‌ನ ಮೊದಲ ಲೆಗ್‌ ಗೆದ್ದು ಉತ್ಸಾಹದಲ್ಲಿರುವ ಬೆಂಗಳೂರು ಎಫ್‌ಸಿ ತಂಡ ಭಾನುವಾರ ಇಲ್ಲಿನ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಎರಡನೇ ಲೆಗ್‌ನಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ.

ADVERTISEMENT

ಒಂದೆಡೆ ಬೆಂಗಳೂರು ತಂಡ ಇಲ್ಲೂ ಗೆಲುವು ಸಾಧಿಸಿ ಫೈನಲ್‌ಗೆ ಸ್ಥಾನ ಕಾದಿರಿಸುವ ತವಕದಲ್ಲಿದೆ. ಇನ್ನೊಂದು ಕಡೆ ಗೋವಾ ತಂಡವು, ಕಂಠೀರವ ಕ್ರೀಡಾಂಗಣದಲ್ಲಿ ಅನುಭವಿಸಿದ ಸೋಲಿಗೆ ಪ್ರತಿಕಾರ ತೀರಿಸುವ ಹವಣಿಕೆಯಲ್ಲಿದೆ.

ಬೆಂಗಳೂರು ತಂಡ ಪ್ಲೇಆಫ್‌ನ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ಎರಡೂ ಪಂದ್ಯಗಳಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟಿಲ್ಲ. ಮುಂಬೈ ಸಿಟಿ ಮೇಲೆ 5–0 ಯಿಂದ ಗೆದ್ದ ಸುನಿಲ್ ಚೆಟ್ರಿ ಪಡೆ, ಮೂರು ದಿನಗಳ ಹಿಂದೆ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಎಫ್‌ಸಿ ಗೋವಾ ಮೇಲೆ 2–0 ಗೆಲುವು ದಾಖಲಿಸಿದೆ. ಹೀಗಾಗಿ ಈ ತಂಡ, ಮನೊಲೊ ಮಾರ್ಕ್ವೆಝ್ ತರಬೇತಿಯ ಗೋವಾ ತಂಡಕ್ಕೆ ಪ್ರಬಲ ಸವಾಲೊಡ್ಡಲಿದೆ.

ಗೋವಾ ಪ್ಲೇಆಫ್‌ನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಐಎಸ್‌ಎಲ್‌ನ ದೀರ್ಘ ಇತಿಹಾಸದಲ್ಲಿ ಗೋವಾ ತಂಡಕ್ಕೆ ಹಿಂದೆಂದೂ ಈ ರೀತಿ ಆಗಿಲ್ಲ. ಭಾನುವಾರದ ಪಂದ್ಯದಲ್ಲಿ ಸೋಲು ಎದುರಾದರೆ ಪ್ಲೇಆಫ್‌ನಲ್ಲಿ ಅದು ತಂಡದ ಕಳಪೆ ಸಾಧನೆ ಎನಿಸಲಿದೆ.

ಗೋಲ್‌ ಕೀಪರ್ ಹೃತಿಕ್ ತಿವಾರಿ ಗೋವಾದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಋತುವಿನ ಏಳು ಪಂದ್ಯಗಳಲ್ಲಿ ಗೋಲು ಬಿಟ್ಟುಕೊಟ್ಟಿಲ್ಲ. 51 ಗೋಲು ಅವಕಾಶಗಳನ್ನು ತಡೆದಿದ್ದಾರೆ.

ಬೆಂಗಳೂರಿನ ತಂಡವು ತನ್ನ ಪ್ರಬಲ ರಕ್ಷಣೆಯ ಜೊತೆ ಗೋಲು ಗಳಿಸುವ ಸಾಮರ್ಥ್ಯದ ಮೇಲೆ ಭರವಸೆ ಇಟ್ಟುಕೊಂಡಿದೆ. ಹಾಲಿ ಐಪಿಎಲ್‌ನಲ್ಲಿ 47 ಗೋಲುಗಳನ್ನು ಗಳಿಸಿದೆ. ಒಂದೇ ಋತುವಿನಲ್ಲಿ 50 ಗೋಲುಗಳನ್ನು ಗಳಿಸಿದ ನಾಲ್ಕನೇ ತಂಡವಾಗುವ ಹಾದಿಯಲ್ಲಿದೆ. ಎಫ್‌ಸಿ ಗೋವಾ (2019–20), ಮುಂಬೈ ಸಿಟಿ (2022–23) ಮತ್ತು ಮೋಹನ್ ಬಾಗನ್ ಸೂಪರ್‌ ಜೈಂಟ್‌ (2023–24) ಮಾತ್ರ ಹಿಂದೆ ಈ ಮೈಲಿಗಲ್ಲು ಸಾಧಿಸಿವೆ.

ಮುಖಾಮುಖಿ: ಐಎಸ್‌ಎಲ್‌ನಲ್ಲಿ ಬೆಂಗಳೂರು– ಗೋವಾದ ತಂಡಗಳು 18 ಬಾರಿ ಮುಖಾಮುಖಿಯಾಗಿವೆ. ಬೆಂಗಳೂರು ಎಂಟು ಪಂದ್ಯಗಳನ್ನು, ಗೋವಾ ಐದು ಪಂದ್ಯಗಳಲ್ಲಿ ಜಯಶಾಲಿಯಾಗಿದೆ. ಐದು ಪಂದ್ಯಗಳು ಸಮಬಲದಲ್ಲಿ (ಡ್ರಾ) ಅಂತ್ಯಕಂಡಿವೆ.

ಆದರೆ ಮನೊಲೊ ಮಾರ್ಕ್ವೆಝ್ ಅವರಿಗೆ ತಮ್ಮ ತಂಡ ಫೈನಲ್ ತಲುಪುವ ನಂಬಿಕೆಯಿದೆ. ‘ಈ ಹಿಂದಿನದ್ದು ಮತ್ತು ಅಂಕಿ ಅಂಶಗಳು ಈಗ ಮುಖ್ಯವಲ್ಲ. ನಾವು ಫೈನಲ್‌ಗೆ ತಲುಪುವೆವು ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ ಅವರು.

‘ಪ್ರಶಸ್ತಿ ಸುತ್ತಿಗೆ ಪಡೆಯುವ ಕಡೆಯೇ ನಮ್ಮ ಗಮನ’ ಎಂದು ಬೆಂಗಳೂರು ಎಫ್‌ಸಿ ಕೋಚ್‌ ಜೆರಾರ್ಡ್‌ ಝಾರ್ಗೋಝಾ ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.