ADVERTISEMENT

ಜಿಂದಾಲ್‌ ಕ್ಲಬ್‌ಗೆ ಪರವಾನಗಿ: ಹೈಕೋರ್ಟ್‌ ತರಾಟೆ

ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:27 IST
Last Updated 27 ಜೂನ್ 2019, 19:27 IST
   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ಪಂದ್ಯಗಳನ್ನು ಆಯೋಜಿಸಲು ಜಿಂದಾಲ್‌ ಕಂಪನಿ ಒಡೆತನದ ಫುಟ್‌ಬಾಲ್‌ ಕ್ಲಬ್‌ಗೆ (ಜೆಎಸ್‌ಡಬ್ಲ್ಯು ಜಿಂದಾಲ್‌ ಫುಟ್‌ಬಾಲ್‌ ಕ್ಲಬ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ) ಪರವಾನಗಿ ನೀಡಿರುವ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

‘ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ಗೆ ಅಥ್ಲೀಟ್‌ಗಳ ಪ್ರವೇಶ ನಿಷೇಧಿಸಲಾಗಿದೆ’ ಎಂದು ಆಕ್ಷೇಪಿಸಿ 17 ಕೋಚ್‌ಗಳು ಹಾಗೂ 33 ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಖ್ಯಾತ ಅಥ್ಲೀಟ್‌ಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಜಿಂದಾಲ್ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆಗೆ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡೇ ಅನುಮತಿ ಪಡೆಯಲಾಗಿದೆ’ ಎಂದರು.

ADVERTISEMENT

‘ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಜಿಂದಾಲ್ ಕಂಪನಿ ₹ 5 ರಿಂದ ₹ 6 ಕೋಟಿ ಖರ್ಚು ಮಾಡಿದೆ. ಫುಟ್ಬಾಲ್ ಪಂದ್ಯಾವಳಿ ಹೊರತುಪಡಿಸಿ ಉಳಿದ ಸಮಯದಲ್ಲಿ ಅಥ್ಲೀಟ್‌ಗಳು ಕ್ರೀಡಾಂಗಣ ಬಳಸಬಹುದಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಓಕಾ ಅವರು, ‘ಕ್ರೀಡಾಂಗಣ ಸರ್ಕಾರದ ಆಸ್ತಿ. ಅದನ್ನು ಖಾಸಗಿ ಕಂಪನಿ ಬಳಕೆಗೆ ಹೇಗೆ ಅನುಮತಿ ನೀಡಲಾಯಿತು, ಒಂದು ವೇಳೆ ಖಾಸಗಿ ಕಂಪನಿಗಳಿಗೆ ಅನುಮತಿ ನೀಡುವುದಾದರೆ, ಅದಕ್ಕಾಗಿ ಅರ್ಜಿ ಆಹ್ವಾನಿಸಿ ಸಾರ್ವಜನಿಕ ಪ್ರಕಟಣೆ ನೀಡಬೇಕಿತ್ತಲ್ಲವೇ, ಈ ದಿಸೆಯಲ್ಲಿ ಯಾವುದೇ ಪಾರದರ್ಶಕ ಪ್ರಕ್ರಿಯೆಯನ್ನು ಏಕೆ ಅನುಸರಿಸಿಲ್ಲ, ಕಂಪನಿಗೆ ಗುತ್ತಿಗೆ ನೀಡಿರುವ ಅವಧಿ ಮುಗಿದು ಹೋಗಿದೆ. ಆದ್ದರಿಂದ ಅದರ ಪರವಾನಗಿ ನವೀಕರಣ ಮಾಡಬೇಡಿ. ಈ ಕುರಿತಂತೆ ನಿಮ್ಮ ನಿಲುವು ಏನು ಎಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕ ನಿರ್ದೇಶನ ನೀಡಿದರು.

ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಚ್‌.ಎಸ್‌.ಪ್ರದೀಪ್‌ ವಕಾಲತ್ತು ವಹಿಸಿದ್ದು, ಹಿರಿಯ ವಕೀಲೆ ಎಸ್‌.ಸುಶೀಲಾ ವಾದ ಮಂಡಿಸಿದರು.

ಕೋರಿಕೆ ಏನು?: ‘ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಅಥ್ಲೀಟ್‌ಗಳು ಒಳ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ. ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಫುಟ್ಬಾಲ್‌ ಆಡಿದರೆ ಅದರಿಂದ ಟ್ರ್ಯಾಕ್‌ ಹಾಳಾಗುತ್ತದೆ. ಆದ್ದರಿಂದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.