ADVERTISEMENT

ಬಿಎಫ್‌ಸಿಯಲ್ಲೇ ಉಳಿಯಲಿರುವ ಜುವಾನನ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 19:45 IST
Last Updated 13 ಜನವರಿ 2020, 19:45 IST
ಜುವಾನನ್ ಗೊನ್ಜಾಲೆಸ್
ಜುವಾನನ್ ಗೊನ್ಜಾಲೆಸ್   

ಬೆಂಗಳೂರು: ಸ್ಪೇನ್‌ನ ಡಿಫೆಂಡರ್ ಜುವಾನನ್ ಗೊನ್ಜಾಲೆಸ್ ಬೆಂಗಳೂರು ಫುಟ್‌ಬಾಲ್ ಕ್ಲಬ್ ಜೊತೆ ಒಪ್ಪಂದವನ್ನು ಮುಂದುವರಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಆಗಿರುವ ಬಿಎಫ್‌ಸಿ ತಂಡದಲ್ಲಿ ಜುವಾನನ್ ಇನ್ನೂ ಎರಡು ವರ್ಷ ಆಡಲಿದ್ದಾರೆ. ಈ ವಿಷಯವನ್ನು ಬಿಎಫ್‌ಸಿ ಸೋಮವಾರ ತಿಳಿಸಿದೆ.

32 ವರ್ಷದ ಜುವಾನನ್ 2016ರಲ್ಲಿ ಬೆಂಗಳೂರು ತಂಡ ಸೇರಿದ್ದರು. ಈ ವರೆಗೆ ಒಟ್ಟು 96 ಪಂದ್ಯಗಳನ್ನು ಆಡಿದ್ದು ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ. 2016ರ ಎಎಫ್‌ಸಿ ಕಪ್‌ ಸೆಮಿಫೈನಲ್‌ನಲ್ಲಿ ಜೊಹೊರ್‌ ದಾರುಲ್ ತಜಿಮ್ ತಂಡದ ವಿರುದ್ಧ ನಿರ್ಣಾಯಕ ಹಂತದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮಿಂಚಿದ್ದರು.

ಒಪ್ಪಂದ ಮುಂದುವರಿಸಿಕೊಳ್ಳುವುದರೊಂದಿಗೆ ಬಿಎಫ್‌ಸಿಯಲ್ಲಿ ಅತಿ ಹೆಚ್ಚು ಕಾಲ ಆಡಿದ ವಿದೇಶಿ ಆಟಗಾರ ಎಂಬ ಶ್ರೇಯಸ್ಸು ಜುವಾನನ್ ಅವರದಾಗಲಿದೆ.

ADVERTISEMENT

‘ಬಿಎಫ್‌ಸಿಯಲ್ಲಿ ಆಡಲು ಅತ್ಯಂತ ಖುಷಿ ಎನಿಸುತ್ತಿದೆ. ಬೆಂಗಳೂರಿಗೆ ಬಂದ ನಂತರ ನನ್ನ ಕುಟುಂಬದವರು ಸಂತಸಗೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಜುವಾನನ್ ಮತ್ತು ನಾನು ಜೊತೆಯಾಗಿ ಬಿಎಫ್‌ಸಿ ಸೇರಿದೆವು. ತಂಡದ ಶ್ರೇಯಸ್ಸಿನಲ್ಲಿ ಅವರ ಕೊಡುಗೆ ಮಹತ್ವದ್ದು. ತಂಡವನ್ನು ಮತ್ತು ಇಲ್ಲಿನ ಫುಟ್‌ಬಾಲ್ ಅಭಿಮಾನಿಗಳನ್ನು ಅವರು ತುಂಬಾ ಪ್ರೀತಿಸಿದ್ದಾರೆ’ ಎಂದು ಕೋಚ್ ಕಾರ್ಲಸ್ ಕ್ವದ್ರತ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.