ADVERTISEMENT

ಡಿಸೆಂಬರ್ 12ಕ್ಕೆ ಕೋಲ್ಕತ್ತಕ್ಕೆ ಲಯೊನೆಲ್ ಮೆಸ್ಸಿ

ಪಿಟಿಐ
Published 15 ಆಗಸ್ಟ್ 2025, 15:24 IST
Last Updated 15 ಆಗಸ್ಟ್ 2025, 15:24 IST
<div class="paragraphs"><p>ಲಯೊನೆಲ್ ಮೆಸ್ಸಿ</p></div>

ಲಯೊನೆಲ್ ಮೆಸ್ಸಿ

   

ಕೋಲ್ಕತ್ತ: ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ. ಭಾರತದ ಫುಟ್‌ಬಾಲ್ ಪ್ರೇಮಿಗಳು ಬಹುದಿನಗಳಿಂದ ಇಟ್ಟುಕೊಂಡಿದ್ದ ನಿರೀಕ್ಷೆ ಈಡೇರಲಿದೆ. 

ಅರ್ಜೆಂಟೀನಾ ಸೂಪರ್ ಸ್ಟಾರ್ ಆಟಗಾರ ಡಿಸೆಂಬರ್ 12ರಂದು ಕೋಲ್ಕತ್ತಕ್ಕೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ಅವರು ಭಾರತದಲ್ಲಿ ಇರಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಸತಾದ್ರು ದತ್ತಾ ಶುಕ್ರವಾರ ಹೇಳಿದ್ದಾರೆ.

ADVERTISEMENT

‘ಗೋಟ್ (ಜಿಒಎಟಿ) ಟೂರ್ ಆಫ್ ಇಂಡಿಯಾ 2025‘ (ಸಾರ್ವಕಾಲೀಕ ಮಹಾನ್ ಆಟಗಾರ ಭಾರತ ಪ್ರವಾಸ) ಕಾರ್ಯಕ್ರಮದ ಅಂಗವಾಗಿ ಅವರು ಭೇಟಿ ನೀಡುತ್ತಿದ್ದಾರೆ. ಈ  ಪ್ರವಾಸದಲ್ಲಿ ಅವರ ಮೊದಲ ನಿಲ್ದಾಣ ಕೋಲ್ಕತ್ತ ಆಗಲಿದೆ. ನಂತರ ಅಹಮದಾಬಾದ್, ಮುಂಬೈ ಮತ್ತು ನವದೆಹಲಿಗೂ ಭೇಟಿ ನೀಡುವರು ಎಂದು ಪಿಟಿಐ ಈ ಹಿಂದೆ ವರದಿ ಮಾಡಿತ್ತು.  ಡಿಸೆಂಬರ್ 15ರಂದು ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ನಂತರ ತಮ್ಮ ದೇಶಕ್ಕೆ ಮರಳುವರು. 

2011ರಲ್ಲಿ ಮೆಸ್ಸಿ ಅವರು ಕೋಲ್ಕತ್ತದ ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ನಡೆದಿದ್ದ ವೆನೆಜುವೆಲಾ ಎದುರು ನಡೆದಿದ್ದ  ಫಿಫಾ ಸ್ನೇಹಪರ ಪಂದ್ಯದಲ್ಲಿ ಆಡಲು ಬಂದಿದ್ದರು. ಅದಾದ ನಂತರ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಈಗಲೇ. 

‘ಮೆಸ್ಸಿ ಅವರ ಆಗಮನವು ದೃಢಪಟ್ಟಿದೆ. ಅದರ ನಂತರವೇ ಅಧಿಕೃತವಾಗಿ (ಸಾಮಾಜಿಕ ಜಾಲತಾಣದಲ್ಲಿ) ಪ್ರಕಟಿಸಲಾಗಿದೆ. ಮೆಸ್ಸಿ ಅವರು ಆಗಸ್ಟ್ 28 ರಿಂದ ಸೆಪ್ಟೆಂಬರ್ 1ರ ಅವಧಿಯಲ್ಲಿ ತಮ್ಮ ಪ್ರವಾಸದ ಕುರಿತ ಪೋಸ್ಟ ಹಾಕುವ ನಿರೀಕ್ಷೆ ಇದೆ’ ಎಂದು ದತ್ತಾ ಹೇಳಿದರು. 

ಮೆಸ್ಸಿ ಅವರು ತಾವು ಭೇಟಿ ನೀಡುವ ನಗರಗಳಲ್ಲಿ ಮಕ್ಕಳೊಂದಿಗೆ ‘ಮಾಸ್ಟರ್‌ ಕ್ಲಾಸ್’ ಕಾರ್ಯಕ್ರಮ ನಡೆಸಿಕೊಡುವರು. ಅವರು ಕೋಲ್ಕತ್ತಕ್ಕೆ ಡಿ.12ರ ರಾತ್ರಿ ಆಗಮಿಸುವರು. ಈ ಪ್ರವಾಸದಲ್ಲಿ ಅತಿ ಹೆಚ್ಚು ಸಮಯವನ್ನು ಫುಟ್‌ಬಾಲ್ ಪ್ರೇಮಿಗಳ ಊರು ಕೋಲ್ಕತ್ತದಲ್ಲಿಯೇ ಕಳೆಯಲಿದ್ದಾರೆ.

‘ಮೆಸ್ಸಿ ಅವರಿಗೆ ಮೇಟ್ (ಅರ್ಜೆಂಟಿನಾದ ಹರ್ಬಲ್ ಚಹಾ) ಅಚ್ಚುಮೆಚ್ಚು. ಅದಕ್ಕಾಗಿ ಅವರಿಗೆ ಅರ್ಜೆಂಟಿನಾ ಮತ್ತು ಅಸ್ಸಾಂ ಚಹಾದ ಸಮ್ಮಿಶ್ರದ ಔತಣ ನೀಡಲಿದ್ದೇವೆ. ಡಿ.13ರಂದು ತಾಜ್ ಬೆಂಗಾಲ್ ಹೋಟೆಲ್‌ನಲ್ಲಿ ಶುಭಮಿಲನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಹಿಲ್ಸಾ ಮೀನು ಸೇರಿದಂತೆ ಬೆಂಗಾಲಿ ಖಾದ್ಯಗಳು ಹಾಗೂ ಸಿಹಿ ತಿಂಡಿಗಳನ್ನು ಆಹಾರ ಮೇಳಕ್ಕಾಗಿ ಸಿದ್ಧಪಡಿಸಲಾಗುತ್ತಿದೆ’ ಎಂದು ದತ್ತಾ ವಿವರಿಸಿದರು. 

ಈಡನ್ ಗಾರ್ಡನ್ಸ್ ಅಥವಾ ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ‘ಗೋಟ್ ಕಾನ್ಸರ್ಟ್‌’ ಮತ್ತು ‘ಗೋಟ್ ಕಪ್’ ಅನಾವರಣ ನಡೆಯುವ ಸಾಧ್ಯತಿಎ ಇದೆ. ಇದೇ ಸಂದರ್ಭದಲ್ಲಿ ಮೆಸ್ಸಿ ಪುತ್ಥಳಿಯನ್ನು ಅನಾವರಣ ಮಾಡಲಾಗುವುದು. 

ಕಾರ್ಯಕ್ರಮದಲ್ಲಿ ಕ್ರಿಕೆಟ್ ತಾರೆ ಸೌರವ್ ಗಂಗೂಲಿ, ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್, ಫುಟ್‌ಬಾಲ್ ದಿಗ್ಗಜ ಬೈಚುಂಗ್ ಭುಟಿಯಾ ಮತ್ತು ಸಿನಿತಾರೆ ಜಾನ್ ಅಬ್ರಹಾಂ ಕೂಡ ಹಾಜರಿರುವರು. 

ಡಿ.13ರಂದು ಸಂಜೆ ಅಹಮದಾಬಾದಿನಲ್ಲಿ ನಡೆಯಲಿರುವ  ಅದಾನಿ ಫೌಂಡೇಷನ್ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸುವರು. ಡಿ.14ರಂದು ಮುಂಬೈನಲ್ಲಿ ಸಿಸಿಐ ಬ್ರೆಬೊರ್ನ್ ಗೋಟ್ ಕಾನ್ಸರ್ಟ್‌ ಮತ್ತು ವಾಂಖೆಡೆ ಕ್ರೀಡಾಂಗಣದಲ್ಲಿ ಗೋಟ್ ಕಪ್ ಕಾರ್ಯಕ್ರಮ ನಡೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.