ಲಯೊನೆಲ್ ಮೆಸ್ಸಿ
ಕೋಲ್ಕತ್ತ: ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.
ಕೋಲ್ಕತ್ತದ ಕಾರ್ಯಕ್ರಮದಲ್ಲಿ ನಿಗದಿತ ಅವಧಿಗಿಂತ ಮುಂಚೆಯೇ ಮೆಸ್ಸಿ ಸ್ಥಳ ತೊರೆದಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಮೈದಾನದಲ್ಲಿ ದಾಂದಲೆ ನಡೆದಿತ್ತು. ಈ ಸಂಬಂಧ ದತ್ತಾ ಅವರನ್ನು ಎಸ್ಐಟಿ ಬಂಧಿಸಿದೆ.
‘ಹಿಂದಿನಿಂದ ಮುಟ್ಟುವುದು ಅಥವಾ ಆಲಿಂಗಿಸುವುದು ಮೆಸ್ಸಿಗೆ ಇಷ್ಟ ಇರಲಿಲ್ಲ. ಇದನ್ನು ಅವರ ಭದ್ರತೆಯ ಹೊಣೆ ಹೊತ್ತಿದ್ದ ಅಧಿಕಾರಿಗಳಿಗೂ ತಿಳಿಸಲಾಗಿತ್ತು’ ಎಂದು ದತ್ತಾ ಎಸ್ಐಟಿ ಅಧಿಕಾರಿಗಳ ದೀರ್ಘ ವಿಚಾರಣೆ ವೇಳೆ ಹೇಳಿದ್ದಾರೆ.
‘ಜನರನ್ನು ನಿಯಂತ್ರಿಸಲು ಪದೇ ಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೂ, ಯಾವುದೇ ಪರಿಣಾಮ ಬೀರಲಿಲ್ಲ. ತನ್ನನ್ನು ಸುತ್ತುವರೆದು ಅಪ್ಪಿಕೊಂಡ ರೀತಿ ವಿಶ್ವಕಪ್ ವಿಜೇತ ಫುಟ್‌ಬಾಲ್ ಆಟಗಾರನಿಗೆ ಇಷ್ಟವಾಗಲಿಲ್ಲ’ ಎಂದು ದತ್ತಾ ಶುಕ್ರವಾರ ತನಿಖಾಧಿಕಾರಿಗಳಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಕಾರ್ಯಕ್ರಮದ ಉದ್ದಕ್ಕೂ ಮೆಸ್ಸಿಯ ಸನಿಹದಲ್ಲಿಯೇ ಇದ್ದರು. ಫೋಟೊ ತೆಗೆಸಿಕೊಳ್ಳುವಾಗ ಮೆಸ್ಸಿ ಸೊಂಟ ಹಿಡಿದ ದೃಶ್ಯಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಬಿಸ್ವಾಸ್ ತಮ್ಮ ಪ್ರಭಾವ ಬಳಸಿ ಸಂಬಂಧಿಕರು ಮತ್ತು ವೈಯಕ್ತಿಕ ಪರಿಚಯಸ್ಥರು ಮೆಸ್ಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಟೀಕೆಗಳು ಹೆಚ್ಚಾದ ಬೆನ್ನಲ್ಲೇ, ತನಿಖೆ ಪೂರ್ಣಗೊಳ್ಳುವವರೆಗೆ ಅವರು ತಮ್ಮ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮೈದಾನದೊಳಗೆ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದೇಗೆ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
‘150 ಗ್ರೌಂಡ್ ಪಾಸ್ ಗಳನ್ನು ನೀಡಲಾಗಿತ್ತು. ಆದರೆ ಸ್ಥಳಕ್ಕೆ ಭಾರಿ ಪ್ರಭಾವಿ ವ್ಯಕ್ತಿಯೊಬ್ಬ ಬಂದಾಗ ಮೂರು ಪಟ್ಟು ಜನ ಸೇರಿದರು’ ಎಂದು ದತ್ತಾ ಹೇಳಿದ್ದಾರೆ. ಮೈದಾನದೊಳಗೆ ನೇರ ಪ್ರವೇಶ ಕಲ್ಪಿಸಿದ್ದರಿಂದಲೇ ದಾಂದಲೆ ನಡೆಯಿತೇ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
‘ಆ ಪ್ರಭಾವಿ ವ್ಯಕ್ತಿ ಮೈದಾನಕ್ಕೆ ಬಂದ ಕೂಡಲೇ ಮೆಸ್ಸಿ ಕಾರ್ಯಕ್ರಮದ ವೇಳಾಪಟ್ಟಿ ಏರುಪೇರಾಯಿತು. ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ದತ್ತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.