ADVERTISEMENT

FIFA World Cup | ಗೆದ್ದರೂ ಹೊರಬಿದ್ದ ಮೆಕ್ಸಿಕೊ

ಸೌದಿ ಅರೇಬಿಯಾ ತಂಡದ ಕನಸು ಭಗ್ನ

ಏಜೆನ್ಸೀಸ್
Published 1 ಡಿಸೆಂಬರ್ 2022, 13:18 IST
Last Updated 1 ಡಿಸೆಂಬರ್ 2022, 13:18 IST
ಲೂಯಿಸ್‌ ಚಾವೇಜ್‌ ಎರಡನೇ ಗೋಲು ಗಳಿಸಿದಾಗ ಮೆಕ್ಸಿಕೊ ಆಟಗಾರರು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಲೂಯಿಸ್‌ ಚಾವೇಜ್‌ ಎರಡನೇ ಗೋಲು ಗಳಿಸಿದಾಗ ಮೆಕ್ಸಿಕೊ ಆಟಗಾರರು ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಲುಸೈಲ್‌, ಕತಾರ್‌: ಮೆಕ್ಸಿಕೊ ತಂಡ ‘ಸಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ, ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲವಾಯಿತು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೆಕ್ಸಿಕೊ 2-1 ಗೋಲುಗಳಿಂದ ಸೌದಿ ಅರೇಬಿಯಾ ತಂಡವನ್ನು ಮಣಿಸಿತು. ಲೀಗ್‌ ವ್ಯವಹಾರ ಕೊನೆಗೊಳಿಸಿದ ಮೆಕ್ಸಿಕೊ, ನಾಲ್ಕು ಪಾಯಿಂಟ್ಸ್‌ ಕಲೆಹಾಕಿ ಪೋಲೆಂಡ್‌ ಜತೆ ಸಮಬಲ ಸಾಧಿಸಿತು. ಅದರೆ ಗೋಲು ಸರಾಸರಿಯಲ್ಲಿ ಹಿಂದೆ ಬಿದ್ದು ಟೂರ್ನಿಯಿಂದ ನಿರ್ಗಮಿಸಿತು.

ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಸೌದಿ ಅರೇಬಿಯಾ, ಆ ಬಳಿಕದ ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿತ್ತು.

ADVERTISEMENT

ಲಸೈಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಅವಧಿಯಲ್ಲಿ ಯಾವುದೇ ಗೋಲು ಬರಲಿಲ್ಲ. 47ನೇ ನಿಮಿಷದಲ್ಲಿ ಹೆನ್ರಿ ಮಾರ್ಟಿನ್‌ ಗೋಲು ಗಳಿಸಿ ಮೆಕ್ಸಿಕೊಗೆ 1–0 ಮುನ್ನಡೆ ತಂದಿತ್ತರು. ಐದು ನಿಮಿಷಗಳ ಬಳಿಕ ಲೂಯಿಸ್‌ ಚಾವೇಜ್‌ (52ನೇ ನಿ.) ಅವರು ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಸೌದಿ ಅರೇಬಿಯಾ ತಂಡದ ಏಕೈಕ ಗೋಲನ್ನು ಸಲೇಂ ಅಲ್‌ದೌಸರಿ ಅವರು ಇಂಜುರಿ ಅವಧಿಯಲ್ಲಿ (90+5 ನಿ.) ಗಳಿಸಿದರು.

ಮೆಕ್ಸಿಕೊ ತಂಡ ವಿಶ್ವಕಪ್‌ನಲ್ಲಿ ಗುಂಪು ಹಂತ ದಾಟಲು ವಿಫಲವಾಗಿದ್ದು 1978ರ ಬಳಿಕ ಇದೇ ಮೊದಲು. ಕಳೆದ ಏಳು ವಿಶ್ವಕಪ್‌ ಟೂರ್ನಿಗಳಲ್ಲೂ ನಾಕೌಟ್‌ ಹಂತ ಪ್ರವೇಶಿಸಿದ್ದ ಸಾಧನೆ ಮಾಡಿತ್ತಲ್ಲದೆ, ಬ್ರೆಜಿಲ್‌ ಬಳಿಕ ಎರಡನೇ ಸ್ಥಾನದಲ್ಲಿತ್ತು. ಬ್ರೆಜಿಲ್ ತಂಡ 1986ರ ಬಳಿಕ ಎಲ್ಲ ವಿಶ್ವಕಪ್‌ ಟೂರ್ನಿಗಳಲ್ಲೂ ನಾಕೌಟ್‌ ಹಂತ ಪ್ರವೇಶಿಸಿದೆ.

ಗೋಲು ಸರಾಸರಿಯಲ್ಲಿ ಪೋಲೆಂಡ್‌ ತಂಡವನ್ನು ಹಿಂದಿಕ್ಕಲು ಮೆಕ್ಸಿಕೊ ತಂಡ ಇನ್ನೊಂದು ಗೋಲಿಗಾಗಿ ಕೊನೆಯ 20 ನಿಮಿಷಗಳಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಿತಾದರೂ, ಯಶ ಕಾಣಲಿಲ್ಲ. 87ನೇ ನಿಮಿಷದಲ್ಲಿ ಯುರಿಲ್‌ ಆಂಟನಾ ಅವರು ಚೆಂಡು ಗುರಿ ಸೇರಿಸಿದರೂ, ರೆಫರಿ ‘ಆಫ್‌ಸೈಡ್‌’ ಎಂದು ಗೋಲು ಮಾನ್ಯ ಮಾಡಲಿಲ್ಲ.

‘ನಮಗೆ ಇನ್ನೊಂದು ಗೋಲು ಬೇಕಾಗಿತ್ತು. ಆದರೆ ಕೊನೆಯಲ್ಲಿ ಏನು ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಮೂರರಿಂದ ನಾಲ್ಕು ಗೋಲು ಗಳಿಸುವ ಗುರಿಯೊಂದಿಗೆ ಕಣಕ್ಕಿಳಿದಿದ್ದೆವು. ಅದು ಕೈಗೂಡಲಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ತಮ್ಮ ಐದನೇ ವಿಶ್ವಕಪ್‌ ಆಡಿದ ಮೆಕ್ಸಿಕೊ ಗೋಲ್‌ಕೀಪರ್ ಗ್ಯುಲೆರ್ಮೊ ಒಕಾವೊ ತಿಳಿಸಿದರು.

ಮೆಕ್ಸಿಕೊ ತನ್ನ ಮೊದಲ ಪಂದ್ಯದಲ್ಲಿ ಪೋಲೆಂಡ್‌ ಜತೆ ಗೋಲುರಹಿತ ಡ್ರಾ ಮಾಡಿಕೊಂಡಿದ್ದರೆ, ಎರಡನೇ ಪಂದ್ಯದಲ್ಲಿ 0–2 ರಲ್ಲಿ ಅರ್ಜೆಂಟೀನಾ ಎದುರು ಪರಾಭವಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.