ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈಗೆ ಹೈದರಾಬಾದ್ ಸವಾಲು

ಪಿಟಿಐ
Published 15 ಜನವರಿ 2021, 13:43 IST
Last Updated 15 ಜನವರಿ 2021, 13:43 IST
ಮುಂಬೈ ಸಿಟಿ ಎಫ್‌ಸಿ ಆಟಗಾರರು–ಪಿಟಿಐ ಚಿತ್ರ
ಮುಂಬೈ ಸಿಟಿ ಎಫ್‌ಸಿ ಆಟಗಾರರು–ಪಿಟಿಐ ಚಿತ್ರ   

ಬ್ಯಾಂಬೊಲಿಮ್‌: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಇದುವರೆಗೆ ಶ್ರೇಷ್ಠ ಆಟವಾಡಿರುವ ಮುಂಬೈ ಸಿಟಿ ಎಫ್‌ಸಿ ತಂಡವು ಅದೇ ಲಯವನ್ನು ಮುಂದುವರಿಸುವ ತವಕದಲ್ಲಿದೆ. ಇಲ್ಲಿಯ ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡವನ್ನು ಎದುರಿಸಲಿದೆ.

ಆಡಿರುವ 10 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರುವ ಮುಂಬೈ 25 ಪಾಯಿಂಟ್ಸ್ ಕಲೆಹಾಕಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

‘ಇದುವರೆಗೆ ತಂಡದಿಂದ ಹೊರಹೊಮ್ಮಿರುವ ಫಲಿತಾಂಶವು ಖುಷಿ ತರಿಸಿದೆ. ಇದೇ ಲಯವನ್ನು ಕಾಯ್ದುಕೊಂಡು ಹೋಗುವುದು ಸವಾಲಿನ ಕೆಲಸ. ಅಗ್ರಸ್ಥಾನಕ್ಕಿಂತ ಆಟದ ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ನಮಗೆ ಮುಖ್ಯವಾಗಿದೆ‘ ಎಂದು ಮುಂಬೈ ಸಿಟಿ ಎಫ್‌ಸಿ ಕೋಚ್‌ ಸೆರ್ಜಿಯೊ ಲೊಬೆರೊ ಹೇಳಿದ್ದಾರೆ.

ADVERTISEMENT

ಕಳೆದ ಒಂಬತ್ತು ಪಂದ್ಯಗಳಲ್ಲಿ ಮುಂಬೈ ಸೋತಿಲ್ಲ. ತಂಡದ ಡಿಫೆನ್ಸ್ ವಿಭಾಗವೂ ಬಲಶಾಲಿಯಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿರುವ ತಂಡಗಳ ಎದುರು ಒಂದೂ ಗೋಲನ್ನು ಮುಂಬೈ ಬಿಟ್ಟುಕೊಟ್ಟಿಲ್ಲ.

ಹೈದರಾಬಾದ್ ತಂಡವೂ ಇದುವರೆಗೆ ಪ್ರಭಾವಿ ಆಟದಿಂದ ಗಮನ ಸೆಳೆದಿದೆ. ಹೀಗಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಅದು ಸದ್ಯ ನಾಲ್ಕನೇ ಸ್ಥಾನದಲ್ಲಿರಲು ಸಾಧ್ಯವಾಗಿದೆ. ಆದರೆ ಆ ತಂಡದಲ್ಲಿರುವ ವಿದೇಶಿ ಆಟಗಾರರು ಹೇಳಿಕೊಳ್ಳುವಂತ ಆಟವಾಡಿಲ್ಲ.

‘ಮುಂಬೈ ತಂಡ ಬಲಿಷ್ಠವಾಗಿದೆ. ಈ ಪಂದ್ಯದಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೇವೆ. ಆದರೆ ಆಟದ ವಿಧಾನವನ್ನು ಬದಲಿಸಿಕೊಳ್ಳುವುದಿಲ್ಲ. ಇದು ಸವಾಲಿನ ಪಂದ್ಯ‘ ಎಂದು ಹೈದರಾಬಾದ್ ಎಫ್‌ಸಿ ಕೋಚ್ ಮ್ಯಾನ್ಯುಯೆಲ್ ಮಾರ್ಕ್‌ವೆಜ್ ಹೇಳಿದ್ದಾರೆ.

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಜಿಎಂಸಿ ಕ್ರೀಡಾಂಗಣ, ಬ್ಯಾಂಬೊಲಿಮ್‌

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.