ADVERTISEMENT

ಐಎಸ್‌ಎಲ್‌: ನೆರಿಜಸ್ ಕಾಲ್ಚಳಕಕ್ಕೆ ಎಟಿಕೆಎಂಬಿ ತತ್ತರ

ಪಿಟಿಐ
Published 7 ಡಿಸೆಂಬರ್ 2020, 19:30 IST
Last Updated 7 ಡಿಸೆಂಬರ್ 2020, 19:30 IST
ಗೋಲು ಗಳಿಸಿ ಸಂಭ್ರಮಿಸಿದ ಜೆಮ್ಶೆಡ್‌ಪುರ ಎಫ್‌ಸಿಯ ನೆರಿಜಸ್ ವಲ್‌ಸ್ಕಿಸ್‌ –ಐಎಸ್ಎಲ್ ಮೀಡಿಯಾ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಜೆಮ್ಶೆಡ್‌ಪುರ ಎಫ್‌ಸಿಯ ನೆರಿಜಸ್ ವಲ್‌ಸ್ಕಿಸ್‌ –ಐಎಸ್ಎಲ್ ಮೀಡಿಯಾ ಚಿತ್ರ   

ವಾಸ್ಕೊ,ಗೋವಾ: ಹ್ಯಾಟ್ರಿಕ್ ಗೆಲುವಿನೊಂದಿಗೆ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಎಟಿಕೆ ಮೋಹನ್ ಬಾಗನ್ ತಂಡ ನೆರಿಜಸ್ ವಲ್‌ಸ್ಕಿಸ್ ಅವರ ಕಾಲ್ಚಳಕಕ್ಕೆ ಬೆದರಿತು. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ವಲ್‌ಸ್ಕಿಸ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಶೆಡ್‌ಪುರ ಎಫ್‌ಸಿ ತಂಡ ಎಟಿಕೆಎಂಬಿಯನ್ನು 2–1ರಲ್ಲಿ ಮಣಿಸಿತು. ಈ ಮೂಲಕ ಏಳನೇ ಆವೃತ್ತಿಯ ಮೊದಲ ಜಯ ತನ್ನದಾಗಿಸಿಕೊಂಡಿತು.

ಕಳೆದ ಬಾರಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿದ್ದ ನೆರಿಜಸ್ ವಲ್‌ಸ್ಕಿಸ್ ಮತ್ತು ರಾಯ್ ಕೃಷ್ಣ ನಡುವಿನ ಹಣಾಹಣಿ ಎಂದೇ ಈ ಪಂದ್ಯವನ್ನು ಬಣ್ಣಿಸಲಾಗುತ್ತಿತ್ತು. ಇದಕ್ಕೆ ತಕ್ಕಂತೆ ಇಬ್ಬರೂ ಆಡಿದರು. ವಲ್‌ಸ್ಕಿಸ್ ಎರಡು ಗೋಲು ಗಳಿಸಿ ತಂಡದ ಜಯಕ್ಕೆ ಕಾರಣರಾದರೆ ರಾಯ್ ಕೃಷ್ಣ ಒಂದು ಗೋಲು ಹೊಡೆದು ತಂಡದ ಸೋಲಿನ ಅಂತರ ಕಡಿಮೆ ಮಾಡಿದರು.

ಆರಂಭದಲ್ಲೇ ಉಭಯ ತಂಡಗಳ ನಡುವೆ ತುರುಸಿನ ಪೈಪೋಟಿ ನಡೆಯಿತು. ಜೆಮ್ಶೆಡ್‌ಪುರ ಆಕ್ರಮಣದಲ್ಲಿ ಮೇಲುಗೈ ಸಾಧಿಸಿತು. ಐದನೇ ನಿಮಿಷದಲ್ಲಿ ಆ ತಂಡಕ್ಕೆ ಕಾರ್ನರ್ ಕಿಕ್ ಅವಕಾಶ ಲಭಿಸಿತು. 20ನೇ ನಿಮಿಷದಲ್ಲಿ ಎಟಿಕೆ ಎಂಬಿ ತಂಡಕ್ಕೆ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೆ ಎರಡೂ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. 29ನೇ ನಿಮಿಷದಲ್ಲಿ ಜೆಮ್ಶೆಡ್‌ಪುರಕ್ಕೆ ಮತ್ತೊಂದು ಅಪೂರ್ವ ಅವಕಾಶ ಲಭಿಸಿತು. ಕಾರ್ನರ್‌ ಕಿಕ್‌ನಲ್ಲಿ ಜಾಕಿಚಾಂದ್ ಸಿಂಗ್ ಒದ್ದ ಚೆಂಡನ್ನು ಗುರಿಮುಟ್ಟಿಸಲು ಪ್ರೀತಮ್ ಕೊತಾಲ್ ಅವಕಾಶ ನೀಡಲಿಲ್ಲ. ಆದರೆ 30ನೇ ನಿಮಿಷದಲ್ಲಿ ವಲ್‌ಸ್ಕಿಸ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅಯ್ತೊರ್ ಮೊನ್ರೊಯ್ ಅವರ ಕಾರ್ನರ್ ಕಿಕ್‌ನಲ್ಲಿ ಮಿಂಚಿನ ವೇಗದ ಗೋಲು ಗಳಿಸಿದ ವಲ್‌ಸ್ಕಿಸ್‌ ತಂಡದಲ್ಲಿ ಸಂಭ್ರಮ ಮೂಡಿಸಿದರು.

ADVERTISEMENT

ದ್ವಿತೀಯಾರ್ಧದಲ್ಲೂ ಉಭಯ ತಂಡಗಳ ಆಟ ಕಳೆಗಟ್ಟಿತು. 51ನೇ ನಿಮಿಷದಲ್ಲಿ ಎಟಿಕೆಎಂಬಿಯ ಆಕ್ರಮಣವನ್ನು ತಡೆದ ಜೆಮ್ಶೆಡ್‌ಪುರದ ಗೋಲ್‌ಕೀಪರ್ ಟಿ.ಪಿ.ರೆಹನೇಶ್ ತಂಡದ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 66ನೇ ನಿಮಿಷದಲ್ಲಿ ವಲ್‌ಸ್ಕಿಸ್ ಮತ್ತೊಮ್ಮೆ ಜಾದೂ ಮಾಡಿದರು. ಮನ್ರೊಯ್ ಅವರ ಕಾರ್ನರ್ ಕಿಕ್‌ ಅನ್ನು ಮೊಹಮ್ಮದ್ ಮೊಬಶಿರ್ ಹೆಡ್ ಮಾಡಿದರು. ಚೆಂಡು ಎದುರಾಳಿ ತಂಡದ ಗೋಲುಪೆಟ್ಟಿಗೆಯ ಕಂಬಕ್ಕೆ ಸೋಕಿ ಚಿಮ್ಮಿತು. ಅಲ್ಲಿ ಕಾಯುತ್ತಿದ್ದ ವಲ್‌ಸ್ಕಿಸ್ಸುಲಭವಾಗಿ ಗುರಿ ಮುಟ್ಟಿಸಿ ಕುಣಿದಾಡಿದರು.

ಪಂದ್ಯದ ಪೂರ್ಣಾವಧಿ ಮುಗಿಯಲು 10 ನಿಮಿಷ ಇದ್ದಾಗ ರೆಹನೇಶ್ ಮಾಡಿದ ಲೋಪವು ಎಟಿಕೆಎಂಬಿಗೆ ಗೋಲು ತಂದುಕೊಟ್ಟಿತು. ಗೋಲ್‌ಕೀಪರ್‌ನನ್ನು ವಂಚಿಸಿ ಮುನ್ನುಗ್ಗಿದ ರಾಯ್ ಕೃಷ್ಣ ಚೆಂಡನ್ನು ಸುಲಭವಾಗಿ ಗುರಿ ಸೇರಿಸಿದರು. ಆದರೆ ಸಮಬಲ ಸಾಧಿಸಲು ನಂತರ ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.