ADVERTISEMENT

ಬಾರದ ಅನುದಾನ: ಫುಟ್‌ಬಾಲ್‌ ಚಟುವಟಿಕೆ ಸ್ಥಗಿತ

ಐದು ವರ್ಷಗಳಿಂದ ಅನುದಾನ ನೀಡದ ಕೆಎಸ್‌ಎಫ್‌ಎ, ಅಭ್ಯಾಸಕ್ಕೆ ಸೂಕ್ತ ಮೈದಾನವೂ ಇಲ್ಲ

ಪ್ರಮೋದ ಜಿ.ಕೆ
Published 7 ಜನವರಿ 2019, 20:26 IST
Last Updated 7 ಜನವರಿ 2019, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಫುಟ್‌ಬಾಲ್‌ ಟೂರ್ನಿಗಳನ್ನು ಸಂಘಟಿಸಲು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಐದು ವರ್ಷಗಳಿಂದ ಅನುದಾನ ನೀಡದ ಕಾರಣ ಜಿಲ್ಲೆಯಲ್ಲಿ ಈ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳು ಸ್ಥಗಿತಗೊಂಡಿವೆ.

ಬೆಂಗಳೂರಿನಲ್ಲಿ ಪ್ರತಿ ವರ್ಷ ಸೂಪರ್‌ ಡಿವಿಷನ್‌, ಎ ಡಿವಿಷನ್‌, ಬಿ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಗಳು ನಡೆಯುತ್ತವೆ. ಕೆಎಸ್‌ಎಫ್‌ಎ ಪ್ರಕಾರ ಪ್ರತಿ ಜಿಲ್ಲಾ ತಂಡಗಳು ವರ್ಷಕ್ಕೆ ಒಂದು ಸಲವಾದರೂ ಅಂತರ ಜಿಲ್ಲೆಗಳ ಟೂರ್ನಿಯಲ್ಲಿ ಆಡಬೇಕು.

ಆದರೆ, ಜಿಲ್ಲಾ ಕೇಂದ್ರದಲ್ಲಿ ಈ ಯಾವ ಟೂರ್ನಿಗಳೂ ನಡೆಯುತ್ತಿಲ್ಲ. ರಾಜ್ಯದ ಜಿಲ್ಲೆಗಳ ಪೈಕಿ 13ರಿಂದ 14 ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಗಳಿವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಷ್ಟೇ ಟೂರ್ನಿಗಳು ನಡೆಯುತ್ತಿವೆ.

ADVERTISEMENT

ವೃತ್ತಿಪರ ತರಬೇತಿ ಪಡೆಯಲು ಜಿಲ್ಲೆಯಲ್ಲಿ ಫುಟ್‌ಬಾಲ್‌ ಮೈದಾನವಿಲ್ಲ. ಮಣ್ಣಿನ ಮೈದಾನದ ಮೇಲೆ ಅಭ್ಯಾಸ ಮಾಡಿ ರಾಜ್ಯಮಟ್ಟದ ಟೂರ್ನಿಗಳಲ್ಲಿ ಟರ್ಫ್‌ ಮೇಲೆ ಆಡಬೇಕಾದ ಅನಿವಾರ್ಯತೆ ಇಲ್ಲಿನ ಆಟಗಾರರದ್ದು. ಈ ಕೊರತೆಯ ನಡುವೆಯೂ ಚಿಂತಾ ಚಂದ್ರಶೇಖರ್‌, ಎಡ್ವಿನ್‌ ಗೊಸಲಾ, ಅರುಣ್‌, ಸುರೇಶ ಕುಮಾರ್‌, ಶಶಿಕುಮಾರ್ ಮತ್ತು ಚಿರಂಜೀವಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. ಶಶಿಕುಮಾರ್‌ ಬೆಂಗಳೂರು ಈಗಲ್ಸ್‌ ಕ್ಲಬ್‌ನಲ್ಲಿ ಆಡುತ್ತಿದ್ದಾರೆ. ಈ ತಂಡಕ್ಕೆ ಅವರು ನಾಯಕ. ಮೊದಲು ಸ್ಟೂಡೆಂಟ್‌ ಯೂನಿಯನ್‌ ತಂಡದ ನಾಯಕರಾಗಿದ್ದರು.

ಧಾರವಾಡ ಜಿಲ್ಲೆಯಲ್ಲಿ ಜೂನಿಯರ್‌ ಹಂತದಲ್ಲಿ ಫೈವ್‌ ಎ ಸೈಡ್‌ ಟೂರ್ನಿಗಳನ್ನು ಮಾತ್ರ ಸಂಘಟಿಸುತ್ತಾರೆ. ಇದರಿಂದ ವೃತ್ತಿಪರ ಆಟಗಾರರಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಅಭ್ಯಾಸ ಮಾಡಲು ಮೈದಾನವೇ ಇಲ್ಲ ಎಂದು ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಎರಡು ಬಾರಿ ಕರ್ನಾಟಕ ತಂಡ ಪ್ರತಿನಿಧಿಸಿದ್ದ ಹುಬ್ಬಳ್ಳಿಯ ಆಟಗಾರರೊಬ್ಬರು ಬೇಸರ ವ್ಯಕ್ತಪಡಿಸಿದರು.

ಟೂರ್ನಿಗಳು ಸ್ಥಗಿತಗೊಳ್ಳಲು ಕಾರಣವೇನೆಂದು ಧಾರವಾಡ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮಕ್ಕೂಭಾಯಿ ಅವರನ್ನು ಪ್ರಶ್ನಿಸಿದಾಗ ‘ಟೂರ್ನಿಗಳನ್ನು ಸಂಘಟಿಸಲು ಬೇಕಾಗುವಷ್ಟು ಹಣ ನಮ್ಮ ಬಳಿಯಿಲ್ಲ. ಟೂರ್ನಿ ನಡೆಸಿದರೆ ಅದಕ್ಕೆ ತಗಲುವ ಖರ್ಚು ಯಾರೂ ಕೊಡುವುದಿಲ್ಲ. ಪ್ರಾಯೋಜಕರೂ ಸಿಗುವುದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರದಲ್ಲಿ ತರಬೇತಿಗೆ ತಂಡ ರಚನೆ
ಕೆಎಸ್‌ಎಫ್‌ಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌ ಇತ್ತೀಚಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಫುಟ್‌ಬಾಲ್‌ ಸಂಸ್ಥೆ ಆರಂಭಿಸಬೇಕು. ನಿರಂತರವಾಗಿ ಕ್ರೀಡಾ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಇದಕ್ಕಾಗಿ ತಂಡ ಕೂಡ ರಚಿಸಿದ್ದಾರೆ.

‘ಮಾಜಿ ಆಟಗಾರರು, ಕೋಚ್‌ಗಳು ಇರುವ 30 ಸದಸ್ಯರ ತಂಡವನ್ನು ಆಯ್ಕೆ ಮಾಡಿ ಪ್ರತಿ ಜಿಲ್ಲೆಗೆ ಒಬ್ಬರನ್ನು ಕಳುಹಿಸಿ ಅಲ್ಲಿನ ಆಟಗಾರರಿಗೆ ಫುಟ್‌ಬಾಲ್‌ ತರಬೇತಿ ನೀಡಲಿದೆ. ಇನ್ನು ಮುಂದೆ ಜಿಲ್ಲಾ ಸಂಸ್ಥೆಗಳು ಟೂರ್ನಿ ನಡೆಸಿದರೆ ಒಂದಷ್ಟು ಹಣವನ್ನು ರಾಜ್ಯಸಂಸ್ಥೆಯೇ ಭರಿಸಲಿದೆ’ ಎಂದು ಕೆಎಸ್‌ಎಫ್‌ಎ ಆಡಳಿತ ಮಂಡಳಿ ಸದಸ್ಯ ಎಂ. ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೌಲಭ್ಯ ಕೊಟ್ಟರೆ ಬೇರೆಡೆ ಹೋಗುವುದಿಲ್ಲ’
ಹುಬ್ಬಳ್ಳಿಯಲ್ಲಿ ವೃತ್ತಿಪರ ತರಬೇತಿಗೆ ಅಗತ್ಯವಿರುವ ಮೈದಾನ ನಿರ್ಮಿಸಿ, ಮೇಲಿಂದ ಮೇಲೆ ಟೂರ್ನಿ ನಡೆಸಿದರೆ ಯಾರೂ ಜಿಲ್ಲೆ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಇಲ್ಲಿ ಅವಕಾಶ ಇಲ್ಲದ ಕಾರಣ ಬೇರೆ ಕಡೆ ಹೋಗುವುದು ಅನಿವಾರ್ಯ ಎಂದು ಹುಬ್ಬಳ್ಳಿಯ ಫುಟ್‌ಬಾಲ್‌ ಆಟಗಾರ ಚಿಂತಾ ಚಂದ್ರಶೇಖರರಾವ್ ಹೇಳಿದರು.

‘ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರಿಗೆ ಅವಕಾಶಗಳ ಕೊರತೆಯಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಡಿಫೆಂಡರ್ ಚಿಂತಾ ಐ ಲೀಗ್‌ನಲ್ಲಿ ಸಲಗಾಂವ್ಕರ್‌, ಚಿರಾಗ್‌ ಯುನೈಟೆಡ್‌, ಪ್ರಯಾಗ ಯುನೈಟೆಡ್‌, ಸ್ಪೋರ್ಟಿಂಗ್ ಗೋವಾ ಮತ್ತು ಮುಂಬೈ ಎಫ್‌.ಸಿ. ತಂಡಗಳಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.