ADVERTISEMENT

ಡೋಪಿಂಗ್‌ ನಿಯಮ ಉಲ್ಲಂಘನೆ: ಪೋ‌ಗ್ಬಾ ಮೇಲೆ ತಾತ್ಕಾಲಿಕ ನಿಷೇಧ

ಎಎಫ್‌ಪಿ
Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
<div class="paragraphs"><p>ಪಾಲ್‌ ಪೋಗ್ಬಾ</p></div>

ಪಾಲ್‌ ಪೋಗ್ಬಾ

   

ಮಿಲಾನ್: ಒಂದು ಕಾಲದಲ್ಲಿ ಜಗತ್ತಿನ ಅತ್ಯಂತ ದುಬಾರಿ ಫುಟ್‌ಬಾಲ್ ಆಟಗಾರ ಎನಿಸಿದ್ದ ಫ್ರಾನ್ಸ್‌ನ ಪಾಲ್‌ ಪೋಗ್ಬಾ ಈಗ ಬೇಡವಾದ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಉದ್ದೀಪನ ಮದ್ದುಸೇವನೆ ನಿಯಮ ಉಲ್ಲಂಘನೆಗಾಗಿ ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.

ಕೆಲ ಬಾರಿ ಗಾಯಾಳಾಗಿದ್ದು, ಬ್ಲ್ಯಾಕ್‌ಮೇಲ್‌ ಪ್ರಕರಣದಲ್ಲಿ ಅವರ ಸೋದರನೇ ಭಾಗಿಯಾಗಿದ್ದು ಅವರಿಗೆ ಹಿನ್ನಡೆ ಉಂಟುಮಾಡಿತ್ತು. ಈಗ 30 ವರ್ಷದ ಮಿಡ್‌ಫೀಲ್ಡರ್‌ ಯುವೆಂಟಸ್ ಪರ ಲಯಕ್ಕೆ ಮರಳಲು ಸಿದ್ಧರಾಗಿರುವಂತೆ ಮದ್ದಿನ ಕಳಂಕ ತಟ್ಟಿದೆ.

ADVERTISEMENT

ಉಡಿನೀಸ್‌ನಲ್ಲಿ ಆಗಸ್ಟ್ 20ರಂದು ನಡೆದ ಋತುವಿನ ಮೊದಲ ಪಂದ್ಯದಲ್ಲಿ ಯುವೆಂಟಸ್ ಗೆದ್ದ ನಂತರ ನಡೆಸಿದ ಮದ್ದುಸೇವನೆ ಪರೀಕ್ಷೆಯಲ್ಲಿ ಟೆಸ್ಟೊಸ್ಟಿರಾನ್ ಮಟ್ಟ ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ ಎಂದು ಇಟಲಿಯ ಉದ್ದೀಪನ ಮದ್ದು ಸೇನವೆ ತಡೆ ಏಜನ್ಸಿ ‘ನಾಡೊ’ ಸೋಮವಾರ ತಿಳಿಸಿದೆ. ಈ ಪಂದ್ಯದಲ್ಲಿ ಅವರು ಸಬ್‌ಸ್ಟಿಟ್ಯೂಟ್‌ ಆಗಿದ್ದು ಅವರಿಗೆ ಆಡುವ ಅವಕಾಶ ನೀಡಿರಲಿಲ್ಲ.

ತಮ್ಮ ಟೀಕಾಕಾರರು ಆಡಿದ ಮಾತುಗಳನ್ನು ಅವರೇ ವಾಪಸು ಪಡೆಯುವಂತೆ ಮಾಡುವುದೇ ತಮ್ಮ ಬಯಕೆ ಎಂದು ಅವರು ಅಲ್‌ ಜಝೀರಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ ಕೆಲವೇ ಸಮಯದಲ್ಲಿ ಈ ಮದ್ದುಸೇವನೆ ಪರೀಕ್ಷೆ ವಿವರ ಬಿಡುಗಡೆಯಾಗಿದೆ.

2018ರಲ್ಲಿ ರಷ್ಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪೋಗ್ಬಾ ಫ್ರಾನ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫ್ರಾನ್ಸ್‌ 4–2ರಲ್ಲಿ ಕ್ರೊವೇಷ್ಯಾ ವಿರುದ್ಧ ಫೈನಲ್‌ನಲ್ಲಿ ಜಯಗಳಿಸಿದ್ದು, ಇದರಲ್ಲಿ ಒಂದು ಗೋಲನ್ನು ಪೋಗ್ಬಾ ಗಳಿಸಿದ್ದರು. ಆದರೆ ಕಳೆದ ವರ್ಷದ ಮಾರ್ಚ್‌ನಿಂದ ಅವರು ರಾಷ್ಟ್ರೀಯ ತಂಡದಲ್ಲಿ ಆಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.