ADVERTISEMENT

ಸ್ವಾರೆಜ್‌ಗೆ ಶತಕ; ಉರುಗ್ವೆಗೆ ಜಯದ ತವಕ

ರಾಯಿಟರ್ಸ್
Published 19 ಜೂನ್ 2018, 18:27 IST
Last Updated 19 ಜೂನ್ 2018, 18:27 IST
   

ರೊಸ್ಟೋವ್: ಲೂಯಿಸ್ ಸ್ವಾರೆಜ್‌ ವೈಯಕ್ತಿಕ 100ನೇ ಅಂತರರಾಷ್ಟ್ರೀಯ ಪಂದ್ಯ ಆಡಲು ಸಜ್ಜಾಗಿದ್ದಾರೆ. ಇದಕ್ಕೆ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ವೇದಿಕೆ ಸಜ್ಜಾಗಿದೆ.

ಇಲ್ಲಿನ ರೊಸ್ತೊವ್‌ ಅರೆನಾದಲ್ಲಿ ಬುಧವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಸ್ವಾರೆಜ್‌ ಮೇಲೆ ನಿರೀಕ್ಷೆಯ ಭಾರ ಹಾಕಿ ಉರುಗ್ವೆ ತಂಡ ಸೌದಿ ಅರೇಬಿಯಾ ವಿರುದ್ಧ ಕಣಕ್ಕೆ ಇಳಿಯಲಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಆತಿಥೇಯ ರಷ್ಯಾ ಎದುರು 0–5 ಗೋಲುಗಳಿಂದ ಸೋತಿದ್ದ ಸೌದಿ ಅರೇಬಿಯಾ ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸುವ ಛಲದೊಂದಿಗೆ ಆಡಲಿದೆ. ಮೊದಲ ಸುತ್ತಿನಲ್ಲಿ ಈಜಿಪ್ಟ್ ಎದುರು 1–0ಯಿಂದ ಗೆದ್ದ ಉರುಗ್ವೆ ತಂಡ ಸ್ವಾರೆಜ್‌ ಶತಕಕ್ಕೆ ಗೆಲುವಿನ ಉಡುಗೊರೆ ನೀಡಿ ನಾಕೌಟ್ ಹಂತಕ್ಕೆ ಪ್ರವೇಶಿಸಲು ತಯಾರಾಗಿದೆ.

ಕಚ್ಚುವ ಆಟಗಾರ: ಎದುರಾಳಿ ತಂಡದ ಆಟಗಾರರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಕಚ್ಚುವ ಮೂಲಕ ಸ್ವಾರೆಜ್‌ ಕುಖ್ಯಾತಿ ಗಳಿಸಿದ್ದಾರೆ. 2010ರ ವಿಶ್ವಕಪ್‌ ನಲ್ಲಿ ಅವರು ಎದುರಾಳಿ ಆಟಗಾರನನ್ನು ಹಿಡಿದಿಟ್ಟು ತಮ್ಮ ತಂಡ ಸಮಬಲದ ಗೋಲು ಗಳಿಸಲು ಕಾರಣರಾಗಿದ್ದರು. 2014ರ ವಿಶ್ವಕಪ್‌ನಲ್ಲಿ ಇಟಲಿಯ ಜಾರ್ಜಿಯೊ ಚೆಲಿನಿ ಅವರನ್ನು ಕಚ್ಚಿದ್ದರು. ಇದರಿಂದಾಗಿ ಅವರ ಮೇಲೆ ನಾಲ್ಕು ತಿಂಗಳು ನಿಷೇಧ ಹೇರಲಾಗಿತ್ತು. ಇದೆಲ್ಲದರ ಹೊರತೂ ಅವರ ಆಟದ ಸೊಬಗನ್ನು ಸವಿಯಲು ಫುಟ್‌ಬಾಲ್ ಪ್ರಿಯರು ಅಂಗಣಕ್ಕೆ ಲಗ್ಗೆ ಇರಿಸುತ್ತಾರೆ.

ADVERTISEMENT

ಬುಧವಾರದ ಪಂದ್ಯದಲ್ಲಿ ಉರುಗ್ವೆ ಮಿಡ್‌ಫೀಲ್ಡ್ ವಿಭಾಗದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ನಹಿತಾನ್ ನಾಂಡೆಜ್ ಮತ್ತು ಜಾರ್ಜಿಯನ್ ಡಿ ಅರಾಸೆಟಾ ಅವರ ಬದಲಿಗೆ ಕಾರ್ಲೋಸ್‌ ಸ್ಯಾಂಚೆಜ್‌ ಮತ್ತು ಕ್ರಿಸ್ಟಿಯಾನೊ ಅವರಿಗೆ ಅವಕಾಶ ನೀಡುವ ನಿರೀಕ್ಷೆ ಇದೆ.

ಸೌದಿ ತಂಡ ಪಯಣಿಸಿದ ವಿಮಾನದಲ್ಲಿ ಬೆಂಕಿ!
ಉರುಗ್ವೆ ಎದುರಿನ ಪಂದ್ಯಕ್ಕಾಗಿ ರೊಸ್ತೊವ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಮಂಗಳವಾರ ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಇದರ ಬಗ್ಗೆ ತನಿಖೆಗೆ ರಷ್ಯಾ ಆದೇಶ ನೀಡಿದೆ.

ವಿಮಾನ ಭೂಸ್ಪರ್ಶ ಆಗುವ ಸಂದರ್ಭದಲ್ಲಿ ಎಂಜಿನ್‌ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಆದರೆ ಎರಡು ಎಂಜಿನ್‌ಗಳು ಕಾರ್ಯಾಚರಿಸುತ್ತಿದ್ದ ಕಾರಣ ಭೂಸ್ಪರ್ಷಕ್ಕೆ ತೊಂದರೆಯಾಗಲಿಲ್ಲ. ಆಟಗಾರರಿಗೆ ಯಾವುದೇ ತೊಂದರೆಯೂ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.