ADVERTISEMENT

ಫಿಫಾ ವಿಶ್ವಕಪ್‌ ಯಶಸ್ವಿ ಆಯೋಜನೆ; ಕತಾರ್‌ ವಿಶ್ವಾಸ

ರಾಯಿಟರ್ಸ್
Published 18 ನವೆಂಬರ್ 2022, 21:08 IST
Last Updated 18 ನವೆಂಬರ್ 2022, 21:08 IST
ನೆದರ್ಲೆಂಡ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ಫಿಫಾ ವಿಶ್ವಕಪ್‌ ಆಯೋಜನೆಯ ಹಾದಿಯಲ್ಲಿ ಸಾಕಷ್ಟು ವಿವಾದಗಳು ಕೇಳಿಬಂದರೂ, ಟೂರ್ನಿಯು ಯಶಸ್ವಿಯಾಗಲಿದೆ ಎಂಬ ವಿಶ್ವಾಸದಲ್ಲಿ ಆತಿಥೇಯ ಕತಾರ್‌ ದೇಶದ ಪ್ರಜೆಗಳು ಇದ್ದಾರೆ.

ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ ಕತಾರ್‌ನ ಒಟ್ಟು ಜನಸಂಖ್ಯೆ ಸುಮಾರು 30 ಲಕ್ಷ. ಅದರಲ್ಲಿ ಕತಾರ್‌ ಮೂಲದವರ ಸಂಖ್ಯೆ 3.50 ಲಕ್ಷ ಮಾತ್ರ. ಅಂದರೆ ವಿಶ್ವಕಪ್‌ ಟೂರ್ನಿಗೆ ನಿರ್ಮಿಸಿರುವ ಎಂಟು ಕ್ರೀಡಾಂಗಣಗಳಲ್ಲಿ ಹಿಡಿಯುವಷ್ಟು ಪ್ರಜೆಗಳು ಮಾತ್ರ ಕತಾರ್‌ನಲ್ಲಿ ಇದ್ದಾರೆ!

ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ 88 ರಷ್ಟು ಮಂದಿ ವಿದೇಶದಿಂದ ಬಂದು ನೆಲೆಸಿದವರಾಗಿದ್ದಾರೆ. ಭಾರತದ ಸುಮಾರು 7.5 ಲಕ್ಷ ಮಂದಿ ಇಲ್ಲಿದ್ಧಾರೆ. ಜನಸಂಖ್ಯೆ ಮತ್ತು ಭೌಗೋಳಿಕತೆಯನ್ನು ನೋಡುವಾಗ, ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅತ್ಯಂತ ಪುಟ್ಟ ರಾಷ್ಟ್ರ ಎಂಬ ಗೌರವ ಕತಾರ್‌ಗೆ ದೊರೆಯಲಿದೆ.

ADVERTISEMENT

ಯಾವುದೇ ರೀತಿಯ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲು ಸ್ಥಳೀಯ ಸಂಘಟಕರು ತಯಾರಿ ನಡೆಸಿದ್ದಾರೆ. ಈ ಟೂರ್ನಿಯ ಮೂಲಕ ಜಾಗತಿಕವಾಗಿ ಗುರುತಿಸಿಕೊಳ್ಳುವುದು ಕತಾರ್‌ನ ಗುರಿ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕಾರ್ಮಿಕರ ಹಕ್ಕುಗಳು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಳೇ ಹೆಚ್ಚು ಬಂದಿವೆ. ಟೂರ್ನಿಯನ್ನು ಯಶಸ್ವಿಯಾಗಿ ನಡೆಸುವುದೇ ಟೀಕಾಕಾರರ ಬಾಯಿ ಮುಚ್ಚಿಸಲು ಕತಾರ್‌ ಮುಂದಿರುವ ಏಕೈಕ ಹಾದಿ’ ಎಂದು ಇಲ್ಲಿನ ಹಮದ್‌ ಬಿನ್‌ ಖಲೀಫಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾರ್ಕ್‌ ಓವೆನ್‌ ಹೇಳುತ್ತಾರೆ.

‘ಮಧ್ಯಪ್ರಾಚ್ಯದಲ್ಲಿ ಕತಾರ್‌ಅನ್ನು ಪ್ರಮುಖ ಕ್ರೀಡಾ ಹಬ್‌ ಆಗಿ ಬಿಂಬಿಸುವುದು ಕೂಡಾ ವಿಶ್ವಕಪ್‌ ಆತಿಥ್ಯದ ಹಿಂದಿರುವ ಮತ್ತೊಂದು ಉದ್ದೇಶ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ವಿಶ್ವಕಪ್‌ ಟೂರ್ನಿಯ ಯಶಸ್ಸು ಕತಾರ್‌ ದೊರೆ ಶೈಖ್‌ ತಮೀಮ್‌ ಬಿನ್‌ ಹಮದ್‌ ಅಲ್‌ ಥಾನಿ ಅವರಿಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಡಲಿದೆ‘ ಎಂಬುದು ಲೇಖಕ ಅಲೆನ್‌ ಫ್ರಮ್‌ಹೆಜ್‌ ಅವರ ಮಾತು.

ಆಲ್ಕೋಹಾಲ್‌ಯುಕ್ತ ಬಿಯರ್‌ ನಿಷೇಧ
ದೋಹಾ: ವಿಶ್ವಕಪ್‌ ಟೂರ್ನಿಯ ಪಂದ್ಯಗಳು ನಡೆಯಲಿರುವ ಎಲ್ಲ ಎಂಟು ಕ್ರೀಡಾಂಗಣಗಳಲ್ಲಿ ಆಲ್ಕೋಹಾಲ್‌ಯುಕ್ತ ಬಿಯರ್‌ ಮಾರಾಟ ನಿಷೇಧಿಸಲಾಗಿದೆ. ಟೂರ್ನಿಯ ಆರಂಭಕ್ಕೆ ಕೆಲವೇ ಗಂಟೆಗಳು ಇರುವಾಗ ಸಂಘಟಕರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಎಲ್ಲ 64 ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಆಲ್ಕೋಹಾಲ್‌ ರಹಿತ ಬಿಯರ್‌ ಮಾರಾಟಕ್ಕೆ ಅವಕಾಶ ಇದೆ.

‘ಆತಿಥೇಯ ದೇಶದ ಸಂಘಟಕರು ಮತ್ತು ಫಿಫಾ ನಡುವಿನ ಮಾತುಕತೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫಿಫಾ ಫ್ಯಾನ್‌ ಫೆಸ್ಟಿವಲ್‌ ನಡೆಯುವ ತಾಣಗಳು, ಫುಟ್‌ಬಾಲ್‌ ಪ್ರೇಮಿಗಳಿಗಾಗಿ ಗುರುತಿಸಿರುವ ಪರವಾನಗಿ ಹೊಂದಿರುವ ಇತರ ತಾಣಗಳಲ್ಲಿ ಆಲ್ಕೋಹಾಲ್‌ಯುಕ್ತ ಬಿಯರ್‌ ಮಾರಾಟ ಮಾಡಬಹುದು. ಆದರೆ ಪಂದ್ಯಗಳು ನಡೆಯುವ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಮಾರಾಟ ಮಾಡುವಂತಿಲ್ಲ’ ಎಂದು ಫಿಫಾ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.