ಮ್ಯಾಡ್ರಿಡ್: ಅಮೋಘ ಆಟ ಆಡಿದ ಲೆವಂಟೆ ತಂಡವು ಲಾ ಲಿಗಾ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದೆ.
ಎಸ್ಟಾದಿಯೊ ಕ್ಯಾಮಿಲೊ ಕ್ಯಾನೊ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಲೆವಂಟೆ 4–2 ಗೋಲುಗಳಿಂದ ರಿಯಲ್ ಬೆಟಿಸ್ ತಂಡವನ್ನು ಮಣಿಸಿತು.
ಎರಡು ತಂಡಗಳೂ ಆರಂಭದಲ್ಲಿ ಎಚ್ಚರಿಕೆಯಿಂದ ಸೆಣಸಿದವು. ಹೀಗಾಗಿ ಮೊದಲ 20 ನಿಮಿಷಗಳ ಆಟ ಗೋಲು ರಹಿತವಾಗಿತ್ತು. 21ನೇ ನಿಮಿಷದಲ್ಲಿ ಲೆವಂಟೆ ತಂಡವು ಖಾತೆ ತೆರೆಯಿತು. ಬೊರ್ಜಾ ಮೆಯೋರಲ್, ಚೆಂಡನ್ನು ಗುರಿ ಸೇರಿಸಿದರು. 35ನೇ ನಿಮಿಷದಲ್ಲಿ ಎನಿಸ್ ಬಾರ್ದಿ ಕಾಲ್ಚಳಕ ತೋರಿದರು. ಹೀಗಾಗಿ ತಂಡವು 2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.
ದ್ವಿತೀಯಾರ್ಧದಲ್ಲೂ ಲೆವಂಟೆ ತಂಡದ ಆಟಗಾರರು ಬೆಟಿಸ್ ತಂಡದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿದರು. 50ನೇ ನಿಮಿಷದಲ್ಲಿ ಜೋಸ್ ಲೂಯಿಸ್ ಮೊರಾಲೆಸ್ ನೊಗಲೆಸ್ ಅವರು ಗೋಲು ಹೊಡೆದರು. 59ನೇ ನಿಮಿಷದಲ್ಲಿ ರುಬೆನ್ ರೊಚಿನಾ ಮಿಂಚಿದರು. ಆಕರ್ಷಕ ರೀತಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಲೆವಂಟೆ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.
ಇನ್ನೊಂದೆಡೆ ಬೆಟಿಸ್ ತಂಡವು ಖಾತೆ ತೆರೆಯುವ ಪ್ರಯತ್ನವನ್ನು ಮುಂದುವರಿಸಿತ್ತು. ತಂಡಕ್ಕೆ 70ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು. ಸರ್ಜಿಯೊ ಕ್ಯಾನಲೆಸ್ ಗೋಲು ಹೊಡೆದರು. ಬಳಿಕ ಜುವಾನ್ಮಿ ಮ್ಯಾಜಿಕ್ ಮಾಡಿದರು. 87ನೇ ನಿಮಿಷದಲ್ಲಿ ಅವರು ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ಈ ಗೆಲುವಿನೊಂದಿಗೆ ಲೆವಂಟೆ ತಂಡವು ಒಟ್ಟು ಪಾಯಿಂಟ್ಸ್ ಅನ್ನು 41ಕ್ಕೆ ಹೆಚ್ಚಿಸಿಕೊಂಡಿದ್ದು ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. 32 ಪಂದ್ಯಗಳಿಂದ 37 ಪಾಯಿಂಟ್ಸ್ ಗಳಿಸಿರುವ ಬೆಟಿಸ್ ತಂಡವು ಪಟ್ಟಿಯಲ್ಲಿ 13ನೇ ಸ್ಥಾನ ಹೊಂದಿದೆ. 69 ಪಾಯಿಂಟ್ಸ್ ಸಂಗ್ರಹಿಸಿರುವ ಎಫ್‌ಸಿ ಬಾರ್ಸಿಲೋನಾ ಅಗ್ರಪಟ್ಟ ಅಲಂಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.