ADVERTISEMENT

ಸ್ಯಾಫ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಮೊದಲ ಗೆಲುವಿಗೆ ಭಾರತದ ಛಲ

ಪಿಟಿಐ
Published 6 ಅಕ್ಟೋಬರ್ 2021, 12:31 IST
Last Updated 6 ಅಕ್ಟೋಬರ್ 2021, 12:31 IST
ಸುನಿಲ್ ಚೆಟ್ರಿ– ರಾಯಿಟರ್ಸ್ ಚಿತ್ರ
ಸುನಿಲ್ ಚೆಟ್ರಿ– ರಾಯಿಟರ್ಸ್ ಚಿತ್ರ   

ಮಾಲೆ, ಮಾಲ್ಡಿವ್ಸ್: ಈ ಬಾರಿಯ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಭಾರತ ತಂಡವು ಗುರುವಾರ ಶ್ರೀಲಂಕಾ ತಂಡಕ್ಕೆ ಮುಖಾಮುಖಿಯಾಗಲಿದೆ.

ಬಾಂಗ್ಲಾದೇಶ ಎದುರು ನಡೆದ ಮೊದಲ ಪಂದ್ಯದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ 1–1ರಿಂದ ಡ್ರಾ ಸಾಧಿಸಿತ್ತು. ಸ್ವತಃ ಚೆಟ್ರಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಆದರೆ 10 ಮಂದಿಯೊಂದಿಗೆ ಆಡಿದ್ದ ಬಾಂಗ್ಲಾ ಸಮಬಲದ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಏಳು ಬಾರಿ ಸ್ಯಾಫ್‌ ಚಾಂಪಿಯನ್ ಆಗಿರುವ ಭಾರತಕ್ಕೆ ಈಗ ಎದುರಾಗಲಿರುವ ಶ್ರೀಲಂಕಾ ಕೂಡ ಟೂರ್ನಿಯಲ್ಲಿ ಪರದಾಟ ನಡೆಸಿದೆ. ಆಡಿದ ಎರಡೂ ಪಂದ್ಯಗಳಲ್ಲೂ ನಿರಾಸೆ ಅನುಭವಿಸಿದೆ. ಎದುರಾಳಿಗಳಿಗೆ ನಾಲ್ಕು ಗೋಲು ಬಿಟ್ಟುಕೊಟ್ಟಿದ್ದು, ಎರಡು ಗೋಲು ಗಳಿಸಿದೆ.

ADVERTISEMENT

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 76 ಗೋಲು ಗಳಿಸಿರುವ ಚೆಟ್ರಿ ಅವರಿಗೆ ಫುಟ್‌ಬಾಲ್ ದಂತಕತೆ, ಬ್ರೆಜಿಲ್‌ನ ಪೆಲೆ ಅವರ ಸಾಧನೆ (77) ಸಮಗಟ್ಟಲು ಇನ್ನು ಒಂದು ಗೋಲು ಬೇಕಾಗಿದೆ. ಶ್ರೀಲಂಕಾ ಎದುರಿನ ಹಣಾಹಣಿಯಲ್ಲಿ ಆ ಕನಸು ಕೈಗೂಡುವ ನಿರೀಕ್ಷೆಯಿದೆ. ಆದರೆ ತಂಡದ ಗೆಲುವಿಗೆ ಇನ್ನುಳಿದ ಆಟಗಾರರ ನೆರವು ನಾಯಕನಿಗೆ ಅಗತ್ಯವಿದೆ.

‘ನಮ್ಮದೇ ಸಂಪೂರ್ಣ ನಿಯಂತ್ರಣದಲ್ಲಿದ್ದ ಪಂದ್ಯವನ್ನು ಗೆಲ್ಲದಿರುವುದಕ್ಕೆ ವಿಷಾದವಿದೆ. ನಮ್ಮ ಆಟಗಾರರಿಂದ ಅನಗತ್ಯ ತಪ್ಪುಗಳು ಘಟಿಸಿದವು. ಸರಳವಾಗಿ ಮಾಡಬೇಕಿದ್ದ ಪಾಸ್‌ಗಳನ್ನು ಕೈಚೆಲ್ಲಿದೆವು‘ ಎಂದು ಭಾರತ ತಂಡದ ಕೋಚ್ ಇಗರ್ ಸ್ಟಿಮ್ಯಾಚ್ ಹೇಳಿದ್ದಾರೆ.

2023ರ ಎಎಫ್‌ಸಿ ಕಪ್‌ಗಾಗಿ ಮುಂದಿನ ವರ್ಷ ಫೆಬ್ರುವರಿಯಲ್ಲಿ ಅರ್ಹತಾ ಟೂರ್ನಿಗಳು ನಡೆಯಲಿವೆ. ಸ್ಯಾಫ್‌ ಚಾಂಪಿಯನ್‌ಷಿಪ್ ಬಳಿಕ ಭಾರತ ಅಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿಲ್ಲ.

ಪಂದ್ಯ ಆರಂಭ: ಸಂಜೆ 4.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.