ADVERTISEMENT

ಮಹಿಳೆಯರ ಕಾಲ್ಚಳಕ ಅಥ್ಲೆಟಿಕ್ಸ್‌ನಲ್ಲಿ ‘ಮದ್ದು’ ಸದ್ದು

ಫುಟ್‌ಬಾಲ್‌ನಲ್ಲಿ ಭಾರತದ ಪುರುಷರ ತಂಡಕ್ಕೆ ನಿರಾಸೆಯ ವರ್ಷವಾಗಿತ್ತು. ಆದರೆ ಮಹಿಳೆಯರು ಕಾಲ್ಚಳಕದ ಮೂಲಕ ಸಂಭ್ರಮಿಸಿದರು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
   

ಫುಟ್‌ಬಾಲ್‌ನಲ್ಲಿ ಭಾರತದ ಪುರುಷರ ತಂಡಕ್ಕೆ ಮತ್ತೊಂದು ನಿರಾಸೆಯ ವರ್ಷವಾಗಿತ್ತು ಇದು. ಆದರೆ ಮಹಿಳೆಯರು ತಮ್ಮ ಕಾಲ್ಚಳಕದ ಮೂಲಕ ಸತತ ಮೂರನೇ ಬಾರಿ ದಕ್ಷಿಣ ಏಷ್ಯಾ ಫುಟ್‌ಬಾಲ್‌ನ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.

ಅರ್ಜೆಂಟೀನಾ ಫುಟ್‌ಬಾಲ್ ತಂಡದ ನಾಯಕ ಲಯೊನೆಲ್ ಮೆಸ್ಸಿ ದಾಖಲೆಯ ಆರನೇ ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆಲ್ಲುವುದರ ಜೊತೆಯಲ್ಲಿ 50 ಗೋಲುಗಳ ಸಾಧನೆ ಮಾಡಿದ ವರ್ಷವೂ ಆಗಿದೆ ಇದು. ಒಂದು ದಶಕದಲ್ಲಿ ಮೆಸ್ಸಿ ಒಂಬತ್ತು ವರ್ಷ 50 ಅಥವಾ ಹೆಚ್ಚು ಗೋಲು ಗಳಿಸಿದ ಸಾಧನೆ ಮಾಡಿ 32ರ ಹರಯದಲ್ಲೂ ದಣಿವಿಲ್ಲದ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಭಾರತದ ಪುರುಷರ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ ವರ್ಷದ ಕೊನೆಯಲ್ಲಿ ಸ್ಥಿರ (108ನೇ ಸ್ಥಾನ) ಪ್ರದರ್ಶನ ನೀಡಿದ್ದರೂ ಒಟ್ಟಾರೆ ಈ ವರ್ಷ 11 ಸ್ಥಾನಗಳ ಕುಸಿತ ಕಂಡಿದೆ. 19 ವರ್ಷದೊಳಗಿನವರು ಉತ್ತಮ ಸಾಧನೆ ಮಾಡಿ ಭರವಸೆ ಮೂಡಿಸಿದ್ದಾರೆ. ಆದರೆ 23 ಮತ್ತು 16 ವರ್ಷದೊಳಗಿನವರ ತಂಡದ ಸಾಧನೆ ನಿರಾಶಾದಾಯಕವಾಗಿತ್ತು.

ADVERTISEMENT

ಇಂಗ್ಲೆಂಡ್‌ನ ಲಿವರ್‌ಪೂಲ್ ತಂಡ ಆರನೇ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿ ಎತ್ತಿ ಹಿಡಿದದ್ದು ಮತ್ತು ಫಿಫಾ ಕ್ಲಬ್ ವಿಶ್ವಕಪ್ ಪ್ರಶಸ್ತಿಯನ್ನೂ ಗೆದ್ದ ಸಾಧನೆಯನ್ನು ಫುಟ್‌ಬಾಲ್ ಕ್ಷೇತ್ರ ಮರೆಯಲಾರದು.

ಅಥ್ಲೆಟಿಕ್ಸ್‌ನಲ್ಲಿ ಈ ಬಾರಿಯೂ ಉದ್ದೀಪನ ಮದ್ದು ಸದ್ದು ಮಾಡಿತ್ತು. ಭಾರತದಲ್ಲಿ ಉದ್ದೀಪನ ಮದ್ದು ಮತ್ತು ವಯಸ್ಸಿನ ಸುಳ್ಳು ಪ್ರಮಾಣಪತ್ರದ ವಿಷಯ ವಿವಾದಕ್ಕೆ ಕಾರಣವಾಯಿತು. ಮಧ್ಯಮ ದೂರ ಓಟಗಾರ್ತಿ ಗೋಮತಿ ಮಾರಿಮುತ್ತು ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದರು. ಸಂಜೀವನಿ ಜಾಧವ್ ಅವರು ಕೂಡ ಉದ್ದೀಪನ ಮದ್ದು ಸೇವಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದು ಏಷ್ಯನ್ ಚಾಂಪಿಯನ್‌ಷಿಪ್‌ಗೆ ತೆರಳುವ ಅವಕಾಶ ಕಳೆದುಕೊಂಡರು. ಇದರ ನಡುವೆಯೂ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಪದಕಗಳನ್ನು ಗೆದ್ದುಕೊಂಡಿತು.

ಭಾರಿ ನಿರೀಕ್ಷೆಯೊಂದಿಗೆ ವಿಶ್ವ ಚಾಂಪಿಯನ್‌ಷಿಪ್‌ಗೆ ತೆರಳಿದ್ದ ಭಾರತದ ಅಥ್ಲೀಟ್‌ಗಳು ನಿರಾಸೆಯೊಂದಿಗೆ ಮರಳಿದ್ದರು. ಪುರುಷರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬಳೆ, ನಡಿಗೆಯಲ್ಲಿ ಕೆ.ಟಿ.ಇರ್ಫಾನ್, ಮಿಶ್ರ ರಿಲೆಯಲ್ಲಿ ಮೊಹಮ್ಮದ್ ಅನಾಸ್, ವಿ.ಕೆ.ವಿಸ್ಮಯ, ಜಿಸ್ನಾ ಮ್ಯಾಥ್ಯೂ ಹಾಗೂ ನಿರ್ಮಲ್ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದೇ ದೊಡ್ಡ ಸಾಧನೆ!

ಜಿನ್ಸನ್ ಜಾನ್ಸನ್, ಮೊಹಮ್ಮದ್ ಅನಾಸ್, ಧರುಣ್ ಅಯ್ಯಸಾಮಿ, ದ್ಯುತಿ ಚಾಂದ್, ಪಿ.ಯು.ಚಿತ್ರಾ, ಎಂ.ಆರ್.ಪೂವಮ್ಮ, ವಿ.ಕೆ.ವಿಸ್ಮಯಾ ಮುಂತಾದವರಿಗೆ ಪೈನಲ್ ಪ್ರವೇಶಿಸುವುದಕ್ಕೂ ಆಗಲಿಲ್ಲ.

ನೀರಜ್ ಚೋಪ್ರಾ ಮತ್ತು ಹಿಮಾ ದಾಸ್ ಗಾಯದ ಸಮಸ್ಯೆಯಿಂದ ಬಳಲಿದರು. ಗಾಯದ ನಡುವೆಯೂ ಹಿಮಾ ದಾಸ್ ಯುರೋಪ್‌ನಲ್ಲಿ ನಡೆದ ವಿವಿಧ ಕೂಟಗಳಲ್ಲಿ ಒಟ್ಟು ಆರು ಚಿನ್ನ ಗಳಿಸಿ ಮಿಂಚಿದರು. ದ್ಯುತಿ ಚಾಂದ್ ವಿಶ್ವಮಟ್ಟದ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.

ಪ್ಯಾರಾ ಅಥ್ಲೀಟ್‌ಗಳು ಈ ವರ್ಷ ಅಮೋಘ ಸಾಧನೆ ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್ ನಲ್ಲಿ ಪದಕಗಳ ಬೇಟೆಯಾಡಿದ ಪ್ಯಾರಾ ಅಥ್ಲೀಟ್ ಗಳು ಬೇರೆ ಈ ಬಾರಿ ಗರಿಷ್ಠ ಸ್ಪರ್ಧೆಗಳಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 19 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರೆ, ಈ ಬಾರಿ 22 ಸ್ಥಾನಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇದೆಲ್ಲದರ ನಡುವೆ, ರಾಷ್ಟ್ರೀಯ ಕ್ರೀಡಾ ನೀತಿಯನ್ನು ಉಲ್ಲಂಘಿಸಿದ್ದಕ್ಕೆ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ಮೇಲೆ ಸರ್ಕಾರ ನಿಷೇಧ ಹೇರಿತ್ತು.

ಫುಟ್‌ಬಾಲ್‌ನಲ್ಲಿ ಭಾರತದ ಏಳು-ಬೀಳು

ಇಂಟರ್ ಕಾಂಟಿನೆಂಟಲ್ ಕಪ್-1 ಡ್ರಾ, 2 ಸೋಲು

ಕಿಂಗ್ಸ್ ಕಪ್ -1 ಜಯ, 1 ಸೋಲು

ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿ-3 ಡ್ರಾ, 2 ಸೋಲು (ಅರ್ಹತೆಗೆ ವಿಫಲ)

19 ವರ್ಷದೊಳಗಿನವರು-11 ಪಂದ್ಯಗಳು; 4 ಜಯ, 1 ಡ್ರಾ, 3 ಸೋಲು, 2 ರದ್ದು

ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಉಜ್ಬೆಕಿಸ್ತಾನ ವಿರುದ್ಧ5–1ರಿಂದ ಗೆದ್ದು ವರ್ಷದ ವಿಜಯಯಾತ್ರೆ ಆರಂಭಿಸಿದ ಮಹಿಳಾ ತಂಡ ನಂತರದ ಸೌಹಾರ್ದ ಪಂದ್ಯಗಳೆಲ್ಲದರಲ್ಲೂ ಉತ್ತಮ ಸಾಧನೆ ಮಾಡಿದೆ.ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಬೀಗಿತು.

ಮೆಸ್ಸಿ 50+ ಗೋಲು ಗಳಿಕೆ

ವರ್ಷ;ಗೋಲು

2010;60

2011;59

2012;91

2014;58

2015;52

2016;59

2017;54

2018;51

2019;50

ಭಾರತ ಪುರುಷರ ಫುಟ್‌ಬಾಲ್ ತಂಡ

ಫಿಫಾ ರ‍್ಯಾಂಕಿಂಗ್ 108

ವರ್ಷದ ಗರಿಷ್ಠ ಸಾಧನೆ 101ನೇ ಸ್ಥಾನ (ಏಪ್ರಿಲ್-ಜೂನ್)

ಕಳೆದ ಡಿಸೆಂಬರ್ ನಲ್ಲಿ ರ‍್ಯಾಂಕಿಂಗ್ 97

ಏಷ್ಯನ್ ರ‍್ಯಾಂಕಿಂಗ್ 19

ಪಾಯಿಂಟ್ಸ್ 1187

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ

ಮಿಶ್ರ ರಿಲೆ 7ನೇ ಸ್ಥಾನ

ಮಹಿಳೆಯರ ಜಾವೆಲಿನ್ ಥ್ರೋ 8ನೇ ಸ್ಥಾನ (ಅನು ರಾಣಿ)

ಪುರುಷರ 3000 ಮೀ ಸ್ಟೀಪಲ್ ಚೇಸ್ 13ನೇ ಸ್ಥಾನ (ಅವಿನಾಶ್ ಸಬಳೆ)

ಪುರುಷರ 20 ಕಿಮೀ ನಡಿಗೆ 27ನೇ ಸ್ಥಾನ (ಇರ್ಫಾನ್ ಕೆ.ಟಿ)

ಪುರುಷರ ಮ್ಯಾರಥಾನ್ 21ನೇ ಸ್ಥಾನ (ಗೋಪಿ ತೋಣಕ್ಕಲ್)

ದಕ್ಷಿಣ ಏಷ್ಯಾ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಭಾರತ

ಚಿನ್ನ 12

ಬೆಳ್ಳಿ 21

ಕಂಚು 15

ಸುನಿಲ್ ಚೆಟ್ರಿ ವರ್ಷವಾರು ಸಾಧನೆ

ವರ್ಷ; ಪಂದ್ಯ;ಗೋಲು

2005;5;1

2006;1;0

2007;7;6

2008;13;8

2009;6;1

2010;6;3

2011;17;13

2012;8;4

2013;11;5

2014;2;3

2015;12;6

2016;4;2

2017;6;5

2018;6;8

2019;11;7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.