ADVERTISEMENT

ಎಂಬಾಪೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ಸ್ಥಗಿತ

ಎಂಬಾಪೆ ವಿರುದ್ಧ ಕೇಳಿಬಂದ ಆರೋಪ

ಏಜೆನ್ಸೀಸ್
Published 12 ಡಿಸೆಂಬರ್ 2024, 12:30 IST
Last Updated 12 ಡಿಸೆಂಬರ್ 2024, 12:30 IST
ಕಿಲಿಯನ್‌ ಎಂಬಾಪೆ
ಕಿಲಿಯನ್‌ ಎಂಬಾಪೆ   

ಸ್ಟಾಕ್‌ಹೋಮ್‌: ರಿಯಲ್ ಮ್ಯಾಡ್ರಿಡ್‌ ಫಾರ್ವರ್ಡ್‌ ಕೀಲಿಯನ್ ಎಂಬಾಪೆ ಅವರ ವಿರುದ್ಧ ಕೇಳಿಬಂದಿತ್ತೆನ್ನಲಾದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಯನ್ನು ಸಾಕ್ಷ್ಯಗಳ ಕೊರತೆಯಿಂದ ಕೊನೆಗೊಳಿಸಲಾಗಿದೆ ಎಂದು ಸ್ವೀಡನ್‌ನ ಪ್ರಾಸಿಕ್ಯೂಟರ್ ಗುರುವಾರ ತಿಳಿಸಿದ್ದಾರೆ.

ಅಕ್ಟೋಬರ್‌ 9 ರಿಂದ 11ರ ನಡುವೆ  ಸ್ಟಾಕ್‌ಹೋಮ್‌ನ ಹೋಟೆಲ್‌ ಒಂದರಲ್ಲಿ ದೌರ್ಜನ್ಯ ನಡೆದಿತ್ತು ಎನ್ನಲಾದ ಈ ಪ್ರಕರಣದ ತನಿಖೆಯಲ್ಲಿ ತನಿಖಾಧಿಕಾರಿಗಳು ಎಲ್ಲೂ ಫ್ರಾನ್ಸ್‌ ಫುಟ್‌ಬಾಲ್‌ ತಾರೆಯ ಹೆಸರು ಬಹಿರಂಗಪಡಿಸಿರಲಿಲ್ಲ. ಈ ಪ್ರಕರಣದಲ್ಲಿ ಎಂಬಾಪೆ ಅವರನ್ನು ಸಿಲುಕಿಸಲಾಗಿದೆ ಎಂದು ಸ್ವೀಡನ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ನೇಷನ್ಸ್ ಲೀಗ್ ಪಂದ್ಯದಲ್ಲಿ 25 ವರ್ಷ ವಯಸ್ಸಿನ ಎಂಬಾಪೆ ಅವರನ್ನು ಆಡಿಸಿರಲಿಲ್ಲ. ಅವರು ಗೆಳೆಯರೊಡನೆ ಸ್ವೀಡನ್ ರಾಜಧಾನಿಗೆ ಆ ವೇಳೆ (ಅ. 9 ರಿಂದ 11) ಬಂದಿದ್ದರು. ಅ. 10ರಂದು ಸ್ಟಾಕ್‌ಹೋಮ್‌ನಲ್ಲಿ ಇಂಥ ಪ್ರಕರಣ ನಡೆದಿದ್ದು ಇದರ ತನಿಖೆ ಕೈಗೊಂಡಿರುವುದಾಗಿ ಸ್ವೀಡನ್‌ನ ತನಿಖಾ ಅಧಿಕಾರಿಗಳು ಅ.15ರಂದು ಪ್ರಕಟಿಸಿದ್ದರು. ಆದರೆ ಅವರು ಎಂಬಾಪೆ ಹೆಸರನ್ನು ಪ್ರಸ್ತಾಪಿಸಿರಲಿಲ್ಲ.

ADVERTISEMENT

ಆದರೆ ಅಫ್ಟೋನ್‌ಬ್ಲಾಡೆಟ್‌, ಎಕ್ಸ್‌ಪ್ರೆಸೆನ್‌ ಸೇರಿ ಸ್ವೀಡನ್‌ನ ಪತ್ರಿಕೆಗಳು, ಪ್ರಮುಖ ಟಿವಿ ಪ್ರಸಾರ ಸಂಸ್ಥೆ ಎಸ್‌ವಿಟಿ, ತನಿಖೆಗೆ ಒಳಪಟ್ಟಿರುವ ವ್ಯಕ್ತಿ ಎಂಬಾಪೆ ಎಂದು ವರದಿ ಮಾಡಿದ್ದವು.

‘ಈಗ ಲಭ್ಯವಿರುವ ಪುರಾವೆಗಳಿಂದ ತನಿಖೆ ಮುಂದುವರಿಸಲು ಆಗುವುದಿಲ್ಲ. ಹೀಗಾಗಿ ವಿಚಾರಣೆ ಕೊನೆಗೊಳಿಸಲಾಗಿದೆ’ ಎಂದು ಪ್ರಾಸಿಕ್ಯೂಟರ್ ಮರಿನಾ ಚಿರಕೋವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಲ್ಲೂ ಸಹ ಎಂಬಾಪೆ ಅವರ ಹೆಸರು ಉಲ್ಲೇಖ ಮಾಡಿಲ್ಲ.

ಈ ಪ್ರಕರಣದಲ್ಲಿ ಎಂಬಾಪೆ ಹೆಸರು ತಳಕು ಹಾಕಿಕೊಂಡಿರುವುದು ಆಘಾತ ತಂದಿದೆ ಎಂದು ಎಂಬಾಪೆ ವಕೀಲರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.