ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌: ಬೆಂಗಳೂರು ಎಫ್‌ಸಿಗೆ ಹೊಸ ಕನಸು

ಇಂದು ಕಂಠೀರವದಲ್ಲಿ ಎಫ್‌ಸಿ ಗೋವಾ ಎದುರು ಪೈಪೋಟಿ

ಜಿ.ಶಿವಕುಮಾರ
Published 2 ಜನವರಿ 2020, 23:54 IST
Last Updated 2 ಜನವರಿ 2020, 23:54 IST
ಸುನಿಲ್‌ ಚೆಟ್ರಿ
ಸುನಿಲ್‌ ಚೆಟ್ರಿ   
""

ಬೆಂಗಳೂರು: ಏಳು ಬೀಳುಗಳೊಂದಿಗೆ 2019ನೇ ಋತುವಿಗೆ ವಿದಾಯ ಹೇಳಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ), ಈಗ ಗೆಲುವಿನೊಂದಿಗೆ ಹೊಸ ಸಂವತ್ಸರಕ್ಕೆ ಕಾಲಿಡಲು ಕಾತರವಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ ಬೆಂಗಳೂರಿನ ತಂಡವು ಎಫ್‌ಸಿ ಗೋವಾ ಎದುರು ಸೆಣಸಲಿದೆ.

ಗೋವಾ ತಂಡವು ಆರನೇ ಆವೃತ್ತಿಯಲ್ಲಿ ಅಮೋಘ ಆಟ ಆಡಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಈ ತಂಡವನ್ನು ಕಟ್ಟಿಹಾಕಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಸುನಿಲ್‌ ಚೆಟ್ರಿ ಬಳಗ ಹವಣಿಸುತ್ತಿದೆ.

ADVERTISEMENT

ಹಾಲಿ ಚಾಂಪಿಯನ್‌ ಬಿಎಫ್‌ಸಿ, ಗೋವಾ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಉಭಯ ತಂಡಗಳು 2017ರಲ್ಲಿ ಮೊದಲ ಸಲ ಮುಖಾಮುಖಿ ಯಾಗಿದ್ದವು. ನವೆಂಬರ್ 30 ರಂದು ನಡೆದಿದ್ದ ರೋಚಕ ಹಣಾಹಣಿಯಲ್ಲಿ ಗೋವಾ 4–3 ಗೋಲುಗಳಿಂದ ಗೆದ್ದಿತ್ತು. ನಂತರ ಬಿಎಫ್‌ಸಿ ಪ್ರಾಬಲ್ಯ ಮೆರೆದಿದೆ. ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯದ ತೋರಣ ಕಟ್ಟಿದೆ.

ಈ ಆವೃತ್ತಿಯಲ್ಲಿ ಆಡಿದ್ದ ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿದ್ದ ಬಿಎಫ್‌ಸಿ, ಹಿಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿದೆ. ಮುಂಚೂಣಿ ವಿಭಾಗದ ಆಟಗಾರರ ವೈಫಲ್ಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಚೆಟ್ರಿ, ಆತಿಥೇಯ ತಂಡದ ಆಧಾರಸ್ಥಂಭವಾಗಿದ್ದಾರೆ. ಬಿಎಫ್‌ಸಿ ಗೆದ್ದಿರುವ ನಾಲ್ಕು ಪಂದ್ಯಗಳಲ್ಲೂ ಅವರ ಪಾತ್ರ ಮಹತ್ವದ್ದೆನಿಸಿದೆ. ಒಟ್ಟು ಐದು ಗೋಲುಗಳನ್ನು ದಾಖಲಿಸಿರುವ ಈ ‘ಫುಟ್‌ಬಾಲ್‌ ಮಾಂತ್ರಿಕ’, ತವರಿನ ಅಂಗಳದಲ್ಲಿ ಮತ್ತೊಮ್ಮೆ ಮೋಡಿ ಮಾಡಲು ಉತ್ಸುಕರಾಗಿದ್ದಾರೆ.

ಎರಿಕ್‌ ಪಾರ್ಟಲು, ಥಾಂಗ್‌ಕೋಶಿಯೆಮ್‌ ಹಾವೊಕಿಪ್‌, ಅಲ್ಬರ್ಟ್‌ ಸೆರಾನ್‌ ಮತ್ತು ಆ್ಯಂಟೋನಿಯೊ ಫರ್ನಾಂಡಿಸ್‌ ಅವರೂ ಮಿಂಚಿನ ಆಟ ಆಡಿ ಹೊಸ ವರ್ಷದ ಖುಷಿಯಲ್ಲಿರುವ ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡುವ ಹುಮ್ಮಸ್ಸಿನಲ್ಲಿದ್ದಾರೆ.

ಅಗ್ರಪಟ್ಟ ಕಾಯ್ದುಕೊಳ್ಳುವ ವಿಶ್ವಾಸ: ಗೋವಾ ತಂಡ ಬಿಎಫ್‌ಸಿಯನ್ನು ಅದರದ್ದೇ ನೆಲದಲ್ಲಿ ಮಣಿಸಿ ಅಗ್ರಪಟ್ಟವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಆಲೋಚನೆಯಲ್ಲಿದೆ.

ಫೆರಾನ್‌ ಕೊರೊಮಿನಾಸ್‌, ಹ್ಯೂಗೊ ಬೊಮೊಸ್‌, ಮೌರ್ತಾಡ ಫಾಲ್‌ ಮತ್ತು ಕಾರ್ಲೊಸ್‌ ಪೆನಾ ಅವರು ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ಬಿಎಫ್‌ಸಿಯ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ಸಜ್ಜಾಗಿದ್ದಾರೆ.

ಈ ತಂಡದ ಕೋಚ್‌ ಸರ್ಜಿಯೊ ಲೊಬೆರಾ ಅವರು ಅಮಾನತು ಶಿಕ್ಷೆ ಎದುರಿಸುತ್ತಿರುವ ಕಾರಣ ಶುಕ್ರವಾರ ತಂಡದೊಂದಿಗೆ ಇರುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಪ್ರವಾಸಿ ಪಡೆ ಹೇಗೆ ಆಡುತ್ತದೆ ಎಂಬ ಕುತೂಹಲ ಈಗ ಗರಿಗೆದರಿದೆ.

*
ಹಿಂದಿನ ಸೋಲುಗಳಿಂದ ಪಾಠ ಕಲಿತಿದ್ದೇವೆ. ಎಫ್‌ಸಿ ಗೋವಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹಾಗೆಂದು ನಾವು ಎದೆಗುಂದಿಲ್ಲ. ಗೆಲುವಿನತ್ತ ಚಿತ್ತಹರಿಸಿದ್ದೇವೆ.
-ಕಾರ್ಲಸ್‌ ಕ್ವದ್ರತ್‌, ಬಿಎಫ್‌ಸಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.