ADVERTISEMENT

ಉದಾಂತ ಗೋಲಿನಲ್ಲಿ ಅರಳಿದ ಜಯ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಚೆಟ್ರಿ 150ನೇ ಪಂದ್ಯದಲ್ಲಿ ಮಿಂಚಲು ವಿಫಲ

ವಿಕ್ರಂ ಕಾಂತಿಕೆರೆ
Published 26 ನವೆಂಬರ್ 2018, 20:26 IST
Last Updated 26 ನವೆಂಬರ್ 2018, 20:26 IST
ಬಿಎಫ್‌ಸಿ ಮತ್ತು ಡೆಲ್ಲಿ ಆಟಗಾರರ ಪೈಪೋಟಿ– ಚಿತ್ರ/ಬಿ.ಎಚ್‌. ಶಿವಕುಮಾರ್‌
ಬಿಎಫ್‌ಸಿ ಮತ್ತು ಡೆಲ್ಲಿ ಆಟಗಾರರ ಪೈಪೋಟಿ– ಚಿತ್ರ/ಬಿ.ಎಚ್‌. ಶಿವಕುಮಾರ್‌   

ಬೆಂಗಳೂರು: ಸೋಲರಿಯದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ (ಬಿಎಫ್‌ಸಿ) ಛಲಕ್ಕೆ ಫಲ ಸಿಕ್ಕತು. ಗೆಲುವಿನ ಸವಿಯುಣ್ಣುವ ಡೆಲ್ಲಿ ಡೈನಾಮೋಸ್ ತಂಡದ ಆಸೆ ಮತ್ತೊಮ್ಮೆ ಕೈಗೂಡದೇ ಹೋಯಿತು. ದ್ವಿತೀಯಾರ್ಧದಲ್ಲಿ ಉದಾಂತ ಸಿಂಗ್‌ ಗಳಿಸಿದ ಗೋಲಿನ ಬಲದಿಂದ ಬಿಎಫ್‌ಸಿ ತಂಡ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 1–0 ಅಂತರದಿಂದ ಗೆದ್ದಿತು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯ ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ಪಾಲಿಗೆ ಮಹತ್ವದ್ದಾಗಿತ್ತು. ತಂಡದ ಪರ ಅವರು ಆಡಿದ 150ನೇ ಪಂದ್ಯ ಆಗಿತ್ತು ಅದು. ಆದರೆ ತವರಿನ ಪ್ರೇಕ್ಷಕರ ಮುಂದೆ ಅವರಿಗೆ ‘ಮ್ಯಾಜಿಕ್‌’ ಮಾಡಲು ಆಗಲಿಲ್ಲ.

ಅಂಬರೀಷ್‌ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದ ನಗರವಾಸಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಅಂಗಣಕ್ಕೆ ಬರಲಿಲ್ಲ. ಹೀಗಾಗಿ ಬೆಂಬಲಿಗರ ‘ಸದ್ದು’ ಕೂಡ ಕಡಿಮೆಯೇ ಇತ್ತು. ಆರಂಭದಲ್ಲಿ ನೀರಸವಾಗಿದ್ದ ಪಂದ್ಯಕ್ಕೆ ಆರನೇ ನಿಮಿಷದಲ್ಲಿ ಉದಾಂತ ಸಿಂಗ್ ಚುರುಕು ತುಂಬಿದರು. ಡೈನಾಮೋಸ್ ಆವರಣಕ್ಕೆ ನುಗ್ಗಿದ ಅವರು ಬಲಭಾಗದಿಂದ ಪ್ರಬಲ ದಾಳಿ ನಡೆಸಿದರು. ಆದರೆ ಅವರು ಬಲವಾಗಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಹೊರಕ್ಕೆ ಚಿಮ್ಮಿತು. ಒಂಬತ್ತನೇ ನಿಮಿಷದಲ್ಲಿ ಚೆಟ್ರಿ ಚೆಂಡಿನೊಂದಿಗೆ ಶರವೇಗದಲ್ಲಿ ಮುನ್ನಡೆದರು. ಗೋಲುಪೆಟ್ಟಿಗೆಯ ಸಮೀಪದಿಂದ ಅವರು ಒದ್ದ ಚೆಂಡನ್ನು ಗೊಲ್‌ಕೀಪರ್ಅಲ್ಬಿನೊ ಗೊವೆನೊ ಗೊಮೆಜ್‌ ಸೊಗಸಾಗಿ ತಡೆದರು.

ADVERTISEMENT

ನಂತರ ಡೈನಾಮೋಸ್ ಆಟಗಾರರೂ ಆಕ್ರಮಣಕ್ಕೆ ಮುಂದಾಗುತ್ತಿದ್ದಂತೆ ಪಂದ್ಯ ರೋಚಕವಾಯಿತು. 15ನೇ ನಿಮಿಷದಲ್ಲಿ ಡೈನಾಮೋಸ್‌ನ ಅಡ್ರಿಯಾನ್ ಪೆರೆಜ್‌ಗೆ ಗೋಲು ಗಳಿಸುವ ಅತ್ಯುತ್ತಮ ಅವಕಾಶ ಲಭಿಸಿತ್ತು. ಬಿಎಫ್‌ಸಿ ಆಟಗಾರರನ್ನು ವಂಚಿಸಿ ಮುಂದೆ ಸಾಗಿದ ಅವರು ಸಮೀಪದಿಂದ ಬಲವಾಗಿ ಒದ್ದ ಚೆಂಡು ಗುರಿ ಮುಟ್ಟಲು ಗುರುಪ್ರೀತ್ ಸಿಂಗ್ ಅವಕಾಶ ನೀಡಲಿಲ್ಲ. 20ನೇ ನಿಮಿಷದಲ್ಲಿ ಮಾರ್ಕೋಸ್‌ ಮತ್ತು 40ನೇ ನಿಮಿಷದಲ್ಲಿ ನಂದಕುಮಾರ್‌ ನಡೆಸಿದ ಪ್ರಯತ್ನವನ್ನೂ ಗುರುಪ್ರೀತ್‌ ಸಿಂಗ್ ವಿಫಲಗೊಳಿಸಿದರು.

ಕೋಪಗೊಂಡ ಬಿಎಫ್‌ಸಿ ಕೋಚ್‌: ಗೋಲು ರಹಿತ ಸಮಬಲದೊಂದಿಗೆ ವಿರಾಮಕ್ಕೆ ತೆರಳಿದ ಬಿಎಫ್‌ಸಿ ದ್ವಿತೀಯಾರ್ಧದಲ್ಲಿ ಆಕ್ರಮಣಕ್ಕೆ ಒತ್ತು ನೀಡಿತು. 49ನೇ ನಿಮಿಷದಲ್ಲಿ ರಿನೊ ಆ್ಯಂಟೊ ಬದಲಿಗೆ ಎರಿಕ್ ಪಾರ್ಟಲು ಅವರನ್ನು ಕರೆಸಿಕೊಂಡಿತು. 55ನೇ ನಿಮಿಷದಲ್ಲಿ ಚೆಂಚೊ ಗೈಷೆನ್‌ ಬದಲಿಗೆ ಶೆಂಬೊಯ್‌ ಹಾಕಿಪ್ ಅವರನ್ನು ಕಣಕ್ಕೆ ಇಳಿಸಿತು. ಆದರೆ ಫಲ ಕಾಣಲಿಲ್ಲ. ಅತ್ತ ಆಟಗಾರರು ಅವಕಾಶಗಳನ್ನು ಕೈಚೆಲ್ಲುತ್ತಿದ್ದರೆ, ಇತ್ತ ಕೋಚ್‌ ಕಾರ್ಲಸ್ ಕ್ವದ್ರತ್‌ ನೀರಿನ ಬಾಟಲ್‌ಗಳನ್ನು ಕಾಲಿನಲ್ಲಿ ಒದ್ದು ಕೋಪವನ್ನು ಹೊರಗೆಡಹುತ್ತಿದ್ದರು.

ಬಿಎಫ್‌ಸಿಯ ತಂತ್ರಗಳಿಗೆ 87ನೇ ನಿಮಿಷದಲ್ಲಿ ಫಲ ಸಿಕ್ಕಿತು. ಎದುರಾಳಿ ಆವರಣದಲ್ಲಿ ಗೊಂದಲ ಸೃಷ್ಟಿಸಿದ ತಂಡಕ್ಕೆ ಉದಾಂತ ಸಿಂಗ್ ಗೋಲು ಗಳಿಸಿಕೊಟ್ಟು ಗ್ಯಾಲರಿಯಲ್ಲಿ ಸಂಭ್ರಮದ ಅಲೆ ಏಳುವಂತೆ ಮಾಡಿದರು.

ಬಿಎಫ್‌ಸಿ ತಂಡ ಮಿಡ್‌ಫೀಲ್ಡರ್‌ ದಿಮಾಸ್ ಡೆಲ್ಗಾಡೊ ಬದಲಿಗೆ ಡಿಫೆಂಡರ್ ರಿನೊ ಆ್ಯಂಟೊ ಅವರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಿತ್ತು. ಡೈನಾಮೋಸ್‌ ಎರಡು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿತ್ತು. ಗೋಲ್‌ಕೀಪರ್ ಫ್ರಾನ್ಸಿಸ್ಕೊಗೆ ತಂಡ ವಿಶ್ರಾಂತಿ ನೀಡಿತ್ತು. ಫಾರ್ವರ್ಡ್‌ ಆಟಗಾರ ಡ್ಯಾನಿಯೆಲ್‌ ಲಾಲ್ಹುಂಪಿಯಾ ಬದಲಿಗೆ ಫಾರ್ವರ್ಡರ್‌ ಆ್ಯಂಡ್ರಿಜಾ ಕಲುದೆರೊವಿಚ್‌ ಅವರನ್ನು ಕರೆಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.