ADVERTISEMENT

ಮೆಸ್ಸಿ–ಸಚಿನ್ ಭೇಟಿಗೆ ಮನಸೋತ ಮುಂಬೈ: ಕ್ರೀಡಾಭಿಮಾನಿಗಳ ಮನದುಂಬಿದ ‘ಸುವರ್ಣ ಕ್ಷಣ’

ವಾಂಖೆಡೆಯಲ್ಲಿ ಕ್ರೀಡಾಭಿಮಾನಿಗಳ ಮನದುಂಬಿದ ‘ಸುವರ್ಣ ಕ್ಷಣ’ : ಚೆಟ್ರಿಗೆ ಜೆರ್ಸಿ ನೀಡಿದ ಅರ್ಜೆಂಟಿನಾ ದಿಗ್ಗಜ

ಪಿಟಿಐ
Published 14 ಡಿಸೆಂಬರ್ 2025, 20:55 IST
Last Updated 14 ಡಿಸೆಂಬರ್ 2025, 20:55 IST
<div class="paragraphs"><p>ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಗೋಟ್ ಇಂಡಿಯಾ ಟೂರ್ –2025’ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಜೆರ್ಸಿಯನ್ನು ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರಿಗೆ ಉಡುಗೊರೆ ನೀಡಿದರು&nbsp;</p></div>

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಗೋಟ್ ಇಂಡಿಯಾ ಟೂರ್ –2025’ ಕಾರ್ಯಕ್ರಮದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಜೆರ್ಸಿಯನ್ನು ಅರ್ಜೆಂಟಿನಾದ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರಿಗೆ ಉಡುಗೊರೆ ನೀಡಿದರು 

   

 –ಪಿಟಿಐ ಚಿತ್ರ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಇದುವರೆಗೆ ಹಲವಾರು ಚಾರಿತ್ರಿಕ ಸಾಧನೆಗಳು ದಾಖಲಾಗಿವೆ. ಭಾನುವಾರ ದಿನವು ಈ ಕ್ರೀಡಾಂಗಣದ ಇತಿಹಾಸ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು. 

ADVERTISEMENT

ಏಕೆಂದರೆ; ವಿಶ್ವ ಫುಟ್‌ಬಾಲ್‌ನ ದಿಗ್ಗಜ ಲಯೊನೆಲ್ ಮೆಸ್ಸಿ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಬ್ಬರ ಭೇಟಿಗೆ ವಾಂಖೆಡೆ ವೇದಿಕೆಯಾಯಿತು.  ಕ್ರೀಡಾಂಗಣದಲ್ಲಿದ್ದ ಸಾವಿರಾರು ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತು.

‘ಗೋಟ್‌ (G.O.A.T: Greatest of All time) ಟೂರ್’ ಅಂಗವಾಗಿ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಮೆಸ್ಸಿ ಅವರು ಮುಂಬೈಗೆ ಭೇಟಿ ನೀಡಿದರು. ಇದೇ ಹೊತ್ತಿನಲ್ಲಿ ಸಚಿನ್, ಭಾರತದ ಫುಟ್‌ಬಾಲ್ ದಂತಕಥೆ ಸುನಿಲ್ ಚೆಟ್ರಿ ಕೂಡ ಮೆಸ್ಸಿಯೊಂದಿಗೆ ಜೊತೆಗೂಡಿದರು. 2011ರಲ್ಲಿ ಇಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಅದೇ ಮೈದಾನದಲ್ಲಿ ಭಾನುವಾರ ಫುಟ್‌ಬಾಲ್ ಜಗತ್ತು ತೆರೆದುಕೊಂಡಿತ್ತು. ‘ಮೆಸ್ಸಿ..ಮೆಸ್ಸಿ..’ ಎಂಬ ಘೋಷಣೆಗಳು ಮುಗಿಲುಮುಟ್ಟಿದವು. 

ಸಂಜೆ ಮೆಸ್ಸಿ, ಅವರ ಸಹ ಆಟಗಾರರಾದ ಲೂಯಿಸ್ ಸೊರೇಝ್ ಮತ್ತು ರಾಡ್ರಿಗೊ ಡಿ ಪಾಲ್ ವಾಂಖೆಡೆಗೆ ಆಗಮಿಸಿದರು. ಮೆಸ್ಸಿ, ಬಿಳಿ ಟೀಶರ್ಟ್ ಮತ್ತು ಕಪ್ಪು ಟ್ರ್ಯಾಕ್‌ ಪ್ಯಾಂಟ್ ಧರಿಸಿದ್ದರು.  ಸ್ವಲ್ಪ ಹೊತ್ತಿನ ನಂತರ ಸಚಿನ್ ಕೂಡ ಬಂದು ಸೇರಿಸಿಕೊಂಡರು. ಆಗ ಸಚಿನ್‌..ಸಚಿನ್‌.. ಘೋಷಣೆಗಳೂ ಪ್ರತಿಧ್ವನಿಸಿದವು. ಮುಸ್ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಚಿನ್ ಅವರು ಮೆಸ್ಸಿಯೊಂದಿಗೆ ವೇದಿಕೆ ಹಂಚಿಕೊಂಡರು. 

‘ಈ ಮೈದಾನದಲ್ಲಿ ನಾನು ಹಲವಾರು ಅಭೂತಪೂರ್ವ ಕ್ಷಣಗಳನ್ನು  ಈ ಹಿಂದೆ ಆಸ್ವಾದಿಸಿದ್ದೇನೆ. ಈ ಮೂವರೂ  ಇದೇ ಮೈದಾನದಲ್ಲಿ ಸೇರಿರುವುದು ಅವಿಸ್ಮರಣೀಯ. ಮುಂಬೈ, ಮುಂಬೈಕರ್‌ಗಳಿಗೆ ಮತ್ತು ಭಾರತಕ್ಕೆ ಸುವರ್ಣ ಸಮಯ. ಲಿಯೊ (ಲಯೊನೆಲ್ ಮೆಸ್ಸಿ) ಅವರನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಪರಿಪೂರ್ಣ ಕ್ರೀಡಾಪಟು ಅವರು. ಸರ್ವಸ್ವವನ್ನು ಸಾಧಿಸಿದ್ದಾರೆ. ಅವರ ಬದ್ಧತೆ, ಶ್ರದ್ಧೆ ಮತ್ತು ನಿರಂತರ ಪ್ರಯತ್ನಗಳು ಅನುಕರಣೀಯ’ ಎಂದು ಸಚಿನ್ ಹೇಳಿದರು. 

ಕ್ರೀಡಾಂಗಣದಲ್ಲಿ ಸೇರಿದ್ದ ಬಾರ್ಸಿಲೋನಾ ತಂಡದ ಅಭಿಮಾನಿಗಳು ‘ಬಾರ್ಸಾ..ಬಾರ್ಸಾ..’, ‘ಸುರೇಝ್..ಸುರೇಝ್‌..’ ಎಂದು ಕೂಗುತ್ತಿದ್ದರು. 

ಮೆಸ್ಸಿ ಅವರು ಸುನಿಲ್ ಚೆಟ್ರಿಯೊಂದಿಗೆ ಬಹಳ ಸಮಯದವರೆಗೆ ಮಾತುಕತೆ ನಡೆಸಿದರು. ತಮ್ಮ ಪೋಷಾಕನ್ನು ಕಾಣಿಕೆ ನೀಡಿದರು. ಮಿತ್ರಾ ಸ್ಟಾರ್ಸ್ ಮತ್ತು ಇಂಡಿಯಾ ಸ್ಟಾರ್ಸ್ ತಂಡಗಳ ಆಟಗಾರರೊಂದಿಗೂ ಸಂವಾದ ನಡೆಸಿದರು. 

ಈ ಸಂದರ್ಭದಲ್ಲಿ ಹಾಜರಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ‘ಪ್ರಾಜೆಕ್ಟ್‌ ಮಹಾ ದೇವ’ ಘೋಷಿಸಿದರು. ಈ ಯೋಜನೆಯಡಿಯಲ್ಲಿ ಮಹಾರಾಷ್ಟ್ರದ ಪ್ರತಿಭಾನ್ವಿತ ಆಟಗಾರರಿಗೆ ಉತ್ತೇಜನ ನೀಡಿ ಪೋಷಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಐಎಫ್‌ಎಫ್‌ ಅಧ್ಯಕ್ಷ ಪ್ರಫುಲ್ ಪಟೇಲ್, ಬಾಲಿವುಡ್ ತಾರೆಯರಾದ ಅಜಯ್ ದೇವಗನ್, ಟೈಗರ್ ಶ್ರಾಫ್ ಮತ್ತಿತರರು ಹಾಜರಿದ್ದರು. 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಲಯೊನೆಲ್ ಮೆಸ್ಸಿ ಸಚಿನ್ ತೆಂಡೂಲ್ಕರ್ ಮತ್ತು ರಾಡ್ರಿಗೊ ಡಿ ಪಾಲ್ 

ಈ ಸಂದರ್ಭದಲ್ಲಿ ಪ್ರದರ್ಶನ ಫುಟ್‌ಬಾಲ್ ಪಂದ್ಯ ನಡೆಯಿತು. ಭಾರತ ತಂಡದ ಆಟಗಾರರಾದ ರಾಹುಲ್ ಭೇಕೆ, ಕೊನ್‌ಶಮ್ ಚಿಂಗ್ಲೆನಸನಾ, ಮಹಿಳಾ ತಂಡದ ತಾರೆ ಬಾಲಾ ದೇವಿ ಅವರೂ ಭಾಗವಹಿಸಿದ್ದರು. ಮೆಸ್ಸಿ, ಲೂಯಿಸ್ ಮತ್ತು ಡಿ ಪಾಲ್ ಅವರು ಚೆಂಡನ್ನು ಕಿಕ್ ಮಾಡಿದರು. 

ಮೆಸ್ಸಿ ಅವರು ಶನಿವಾರ ಕೋಲ್ಕತ್ತ, ಹೈದರಾಬಾದ್‌ ನಗರಗಳಿಗೆ ಭೇಟಿ ನೀಡಿದ್ದರು. ಸೋಮವಾರ ಅವರು ನವದೆಹಲಿಗೆ ತೆರಳುವರು. 

ದೆಹಲಿಯಲ್ಲಿ ಕಾರ್ಯಕ್ರಮ ಇಂದು

ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ದಾಂದಲೆ ನಡೆದ ಬೆನ್ನಲ್ಲೇ, ಸೋಮವಾರ ದೆಹಲಿಯಲ್ಲಿ ಮೆಸ್ಸಿ ಕಾರ್ಯಕ್ರಮ ನಡೆಯಲಿರುವ ಅರುಣ್‌ ಜೇಟ್ಲಿ ಕ್ರೀಡಾಂಗಣಕ್ಕೆ ಅಲ್ಲಿನ ಪೊಲೀಸರು ಬಹು
ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ. ಕ್ರೀಡಾಂಗಣದಲ್ಲಿ ಮಧ್ಯಾಹ್ನ 1ರಿಂದ ಸಂಜೆ 4ರ ಒಳಗೆ ಮೆಸ್ಸಿ ಕಾರ್ಯಕ್ರಮ ನಿಗದಿಯಾಗಿದೆ. ಜನದಟ್ಟಣೆ, ಸಂಚಾರ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಕ್ರೀಡಾಂಗಣ ಪ್ರವೇಶ ದ್ವಾರದಲ್ಲಿ ನೂಕು ನುಗ್ಗಲು ತಪ್ಪಿಸಲು ಪರ್ಯಾಯ ಕ್ರಮ ವಹಿಸಲಾಗಿದೆ ಎಂದು
ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯ ಆಯೋಜಕ ಕಸ್ಟಡಿಗೆ (ಕೋಲ್ಕತ್ತ ವರದಿ):

ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಬಿಧಾನನಗರ ಪೊಲೀಸರು ಶನಿವಾರ ರಾತ್ರಿ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಅವರನ್ನು 14 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.