ADVERTISEMENT

ಇತಿಹಾಸವೋ..ಪುನರಾವರ್ತನೆಯೋ..?

ಫ್ರಾನ್ಸ್‌ಗೆ ಎರಡನೇ ಪ್ರಶಸ್ತಿ ಮೇಲೆ ನೋಟ

ಏಜೆನ್ಸೀಸ್
Published 14 ಜುಲೈ 2018, 19:30 IST
Last Updated 14 ಜುಲೈ 2018, 19:30 IST
   

ಮಾಸ್ಕೊ: ಕೊನೆಗೂ ಆ ದಿನ ಕೋಟ್ಯಂತ ಫುಟ್‌ಬಾಲ್ ಪ್ರೇಮಿಗಳ ಮನದ ಹೊಸ್ತಿಲಿಗೆ ಬಂದು ನಿಂತಿದೆ. ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ ಪಂದ್ಯ ಇಲ್ಲಿನ ಲುಜ್‌ನಿಕಿಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆಯಲಿದೆ.

ಮೊದಲ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಹಾತೊರೆಯುತ್ತಿರುವ ಕ್ರೊವೇಷ್ಯಾ ಮತ್ತು ಎರಡನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಕಸನು ಹೊತ್ತಿರುವ ಫ್ರಾನ್ಸ್ ತಂಡಗಳತ್ತ ಈಗ ಎಲ್ಲರ ಚಿತ್ತ ಹರಿದಿದೆ.

ರೋಮಾಂಚಕಾರಿ ಗೋಲುಗಳು, ಅಚ್ಚರಿಯ ಫಲಿತಾಂಶಗಳು, ಸಂಘಟಿತ ಮೋಹಕ ಆಟದ ಕೊನೆಯಲ್ಲಿ ಪ್ರಶಸ್ತಿ ಹಂತದ ಹಣಾಹಣಿಗೆ ಸಿದ್ಧವಾಗಿರುವ ಎರಡೂ ತಂಡಗಳು ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿವೆ. ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 1–0 ಅಂತರದಿಂದ ಗೆದ್ದಿರುವ ಫ್ರಾನ್ಸ್‌ಗೆ ಸಮಬಲದ ಪೈಪೋಟಿ ನೀಡಲು ಕ್ರೊವೇಷ್ಯಾ ಸಿದ್ಧವಾಗಿದೆ. ಈ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 2–1ರಿಂದ ಗೆದ್ದಿತ್ತು.

ADVERTISEMENT

1998ರಲ್ಲಿ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ಅಂದಿನ ಸೆಮಿಫೈನಲ್‌ ಪಂದ್ಯದಲ್ಲಿ ಕ್ರೊವೇಷ್ಯಾವನ್ನು 2–1ರಿಂದ ಮಣಿಸಿತ್ತು. ಆಗ ಫ್ರಾನ್ಸ್‌ ತಂಡದ ನಾಯಕ ಆಗಿದ್ದ ಡೈಡಿಯರ್ ದೆಶ್ಚಾಂಪ್ಸ್‌ ಈಗ ಆ ತಂಡದ ಕೋಚ್‌. 1998ರ ಸೋಲಿಗೆ ತಂಡದ ಮೇಲೆಯೂ ದೆಶ್ಚಾಂಪ್ಸ್ ಮೇಲೆಯೂ ಸೇಡು ತೀರಿಸಿಕೊಳ್ಳಲು ಕ್ರೊವೇಷ್ಯಾಗೆ ಈಗ ಉತ್ತಮ ಅವಕಾಶ ಒದಗಿದೆ.

ಫ್ರಾನ್ಸ್ ಗೆದ್ದರೆ ದೆಶ್ಚಾಂಪ್ಸ್‌ ಒಂದೆಡೆ ಗೆಲುವಿನ ಸಂಭ್ರಮದಲ್ಲಿ ಮೀಯಲಿದ್ದರೆ, ಮತ್ತೊಂದೆಡೆ ಒಮ್ಮೆ ಆಟಗಾರನಾಗಿಯೂ ಮತ್ತೊಮ್ಮೆ ಕೋಚ್ ಆಗಿಯೂ ವಿಶ್ವಕಪ್ ಗೆದ್ದ ಅಪರೂಪದ ಸಾಧನೆಯ ಒಡೆಯನಾಗಲಿದ್ದಾರೆ. ಮರಿಯೊ ಜಗಲೊ ಮತ್ತು ಫ್ರಾನ್ಜ್‌ ಬೆಕೆನ್‌ಬೌರ್‌ ಅವರು ಈ ಹಿಂದೆ ಇಂಥ ಸಾಧನೆ ಮಾಡಿದ್ದಾರೆ.

ಯೂರೊ ಕಪ್ ಸೋಲಿನ ಬೇಸರ ಕಳೆಯಲು ಯತ್ನ: ಎರಡು ವರ್ಷಗಳ ಹಿಂದೆ ಯೂರೊ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಸೋತ ಫ್ರಾನ್ಸ್‌ ವಿಶ್ವಕಪ್ ಗೆಲ್ಲುವ ಮೂಲಕ ಆ ಬೇಸರವನ್ನು ಕಳೆಯಲು ಪ್ರಯತ್ನಿಸಲಿದೆ. ಪಂದ್ಯದ ಕೊನೆಯ ವರೆಗೂ ಹೋರಾಡುವ ಮನೋಭಾವ ಹೊಂದಿರುವ ಫ್ರಾನ್ಸ್‌ ತಂಡ ಫೈನಲ್ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಕ್ರೊವೇಷ್ಯಾ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಹೀಗಾಗಿ ಪಂದ್ಯ ಕ್ಷಣಕ್ಷಣವೂ ರೋಚಕವಾಗಿರಲಿದೆ ಎಂಬುದು ಕ್ರೀಡಾ ಪ್ರೇಮಿಗಳ ನಿರೀಕ್ಷೆ.

ನಗರ: ಮಾಸ್ಕೊ

ಸ್ಥಳ:ಲುಜ್‌ನಿಕಿಕ್ರೀಡಾಂಗಣ

ಸಾಮರ್ಥ್ಯ: 78,011

ಕ್ರೊವೇಷ್ಯಾದಲ್ಲಿ ಬದಲಾವಣೆ ಸಾಧ್ಯತೆ?

ನೌಕೌಟ್ ಹಂತದ ಪಂದ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಸಾಮರ್ಥ್ಯ ಹೊರಗೆಡವಿದ ಕೆಲ ಆಟಗಾರರು ಅಸ್ವಸ್ಥರಾಗಿರುವ ಕಾರಣ ಕ್ರೊವೇಷ್ಯಾ ತಂಡದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ.

ನಾಕೌಟ್ ಪಂದ್ಯಗಳಲ್ಲಿ ಕ್ರೊವೇಷ್ಯಾ ತಂಡ ಡೆನ್ಮಾರ್ಕ್‌, ರಷ್ಯಾ ಮತ್ತು ಇಂಗ್ಲೆಂಡ್ ಎದುರು ಹೆಚ್ಚುವರಿ ಅವಧಿಯಲ್ಲಿ ಗೆದ್ದಿತ್ತು. ಹೀಗಾಗಿ ಆಟಗಾರರು ಸಹಜವಾದ ಬಳಲಿಕೆಗೆ ಒಳಗಾಗಿದ್ದಾರೆ.

‘ಇದು ವಿಶ್ವಕಪ್ ಫೈನಲ್. ಇಂಥ ಮಹತ್ವದ ಪಂದ್ಯದಲ್ಲಿ ಆಡಬೇಕೆಂಬುದು ಯಾವುದೇ ಆಟಗಾರನ ಕನಸು ಆಗಿರುತ್ತದೆ. ಆದರೆ ನಮ್ಮ ತಂಡದ ಕೆಲ ಆಟಗಾರರು ಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಆಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಾನು ನಿರಾಳನಾಗಿದ್ದೇನೆ’ ಎಂದು ಕೋಚ್‌ ಜಾಲ್ಕೊ ಡಾಲಿಕ್ ಹೇಳಿದ್ದಾರೆ.

ಲುಜ್‌ನಿಕಿ ಅಂಗಣದಲ್ಲಿ ಫೈನಲ್‌ ಕದನದ ರಿಂಗಣ

ಕ್ರೀಡೆ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಲುಜ್‌ನಿಕಿ ಕ್ರೀಡಾ ಸಂಕೀರ್ಣದಲ್ಲಿದೆ, ವಿಶ್ವಕಪ್‌ ಫೈನಲ್‌ಗೆ ವೇದಿಕೆಯಾಗಲಿರುವ ಲುಜ್‌ನಿಕಿ ಕ್ರೀಡಾಂಗಣ. 1956ರ ಬೇಸಿಗೆ ಕ್ರೀಡಾಕೂಟಕ್ಕಾಗಿ ನಿರ್ಮಿಸಿದ ಈ ಕ್ರೀಡಾಂಗಣದಲ್ಲಿ ಬಗೆ ಬಗೆಯ ಸಾವಿರಾರು ಕಾರ್ಯಕ್ರಮಗಳು ನಡೆದಿವೆ. 1980ರ ಒಲಿಂಪಿಕ್ಸ್‌ ಮತ್ತು ಐಸ್ ಹಾಕಿಯ ವಿಶ್ವ ಚಾಂಪಿಯನ್‌ಷಿಪ್‌ಗೆ ಇದು ಆತಿಥ್ಯ ವಹಿಸಿದೆ.

ಫುಟ್‌ಬಾಲ್ ಕ್ರೀಡೆಗೆ ಇಲ್ಲಿ ಆದ್ಯತೆ. ಈ ವರೆಗೆ ಇಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಫುಟ್‌ಬಾಲ್ ಪಂದ್ಯಗಳು ನಡೆದಿವೆ. ರಷ್ಯಾ ತಂಡದ ತವರಿನ ಪಂದ್ಯಗಳಲ್ಲಿ ಹೆಚ್ಚಿನವು ಇಲ್ಲೇ ನಡೆದಿವೆ. 1999ರ ಯೂಫಾ ಕಪ್‌ ಟೂರ್ನಿಯ ಫೈನಲ್ ಪಂದ್ಯ ಇಲ್ಲೇ ನಡೆದಿತ್ತು.

ಮರು ವಿನ್ಯಾಸ: ವಿಶ್ವಕ‍‍ಪ್ ಟೂರ್ನಿಗಾಗಿ ಈ ಕ್ರೀಡಾಂಗಣದ ಮರುವಿನ್ಯಾಸ ಕಾರ್ಯ 2013ರಲ್ಲಿ ಆರಂಭಗೊಂಡಿತ್ತು. ಹಳೆಯ ಶೈಲಿಯನ್ನು ಉಳಿಸಿಕೊಂಡೇ ಹೊಸತನ ನೀಡುವ ಕಾರ್ಯ ಸವಾಲಿನದ್ದಾಗಿತ್ತು. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸಿದ ಕಾರ್ಮಿಕರು ಮತ್ತು ಕುಶಲಕರ್ಮಿಗಳು ಮೆಚ್ಚುಗೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.