ADVERTISEMENT

FIFA World Cup: ‘ವಿಶ್ವ’ ವಿಜೇತರಿಗೆ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 21:45 IST
Last Updated 20 ಡಿಸೆಂಬರ್ 2022, 21:45 IST
ಬ್ಯೂನಸ್‌ ಐರಿಸ್‌ನಲ್ಲಿ ಜನಸ್ತೋಮದ ಮಧ್ಯೆ ತೆರೆದ ಬಸ್ಸಿನಲ್ಲಿ ಮೆರವಣಿಗೆ ಸಾಗಿದ ಅರ್ಜೆಂಟೀನಾ ಆಟಗಾರರು ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ
ಬ್ಯೂನಸ್‌ ಐರಿಸ್‌ನಲ್ಲಿ ಜನಸ್ತೋಮದ ಮಧ್ಯೆ ತೆರೆದ ಬಸ್ಸಿನಲ್ಲಿ ಮೆರವಣಿಗೆ ಸಾಗಿದ ಅರ್ಜೆಂಟೀನಾ ಆಟಗಾರರು ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ   

ಬ್ಯೂನಸ್‌ ಐರಿಸ್‌: ಮೂವತ್ತಾರು ವರ್ಷಗಳ ನಂತರ ಫಿಫಾ ವಿಶ್ವಕಪ್ ಜಯಿಸಿದ ಅರ್ಜೆಂಟೀನಾ ತಂಡದ ಆಟಗಾರರಿಗೆ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು.

ಕತಾರ್‌ನಲ್ಲಿ ಭಾನುವಾರ ನಡೆದ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4–2ರಿಂದ ಫ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟೀನಾ ಪ್ರಶಸ್ತಿಗೆ ಮುತ್ತಿಕ್ಕಿತ್ತು. ತಂಡವು ಮಂಗಳವಾರ ಬೆಳಗಿನ ಜಾವ ಬ್ಯೂನಸ್‌ ಐರಿಸ್‌ನ ಎಜೆಜಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ಲಯೊನೆಲ್ ಮೆಸ್ಸಿ ಪಡೆಯನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.

ವಿಮಾನದಿಂದಿಳಿದ ಮೆಸ್ಸಿ ಹಾಗೂ ಕೋಚ್‌ ಲಯೊನೆಲ್ ಸ್ಕಾಲೊನಿ ಮುಂದೆ ಸಾಗಿದರು. ಉಳಿದ ಆಟಗಾರರು ಅವರನ್ನು ಹಿಂಬಾಲಿಸಿದರು. ‘ಚಾಂಪಿಯನ್‌ಗಳಿಗೆ ಧನ್ಯವಾದ‘ ಎಂಬ ಬರಹದ ಬ್ಯಾನರ್‌ಗೆಆಟಗಾರರು ಸಹಿ ಹಾಕಿದರು. ಈ ವೇಳೆ ಹಾಡು ಮತ್ತು ನೃತ್ಯದ ಮೂಲಕ ಜನರು ಮೈಮರೆತು ಸಂಭ್ರಮಿಸುತ್ತಿದ್ದರು. ಬಳಿಕ ತೆರೆದ ಬಸ್ಸಿನಲ್ಲಿ ಆಟಗಾರರು ಮೆರವಣಿಗೆ ಮೂಲಕ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯ ಮುಖ್ಯ ಕಚೇರಿಗೆ
ತೆರಳಿದರು.

ADVERTISEMENT

ದಾರಿಯುದ್ದಕ್ಕೂ ರಾಷ್ಟ್ರಧ್ವಜಗಳನ್ನು ಹಿಡಿದಿದ್ದ ಅಭಿಮಾನಿಗಳು ಆಟಗಾರರ ಗಮನ ಸೆಳೆಯಲು ಕಾತರಿಸಿದಂತಿತ್ತು. ಸುಮಾರು ಎರಡು ಲಕ್ಷದಷ್ಟಿದ್ದ ಅಭಿಮಾನಿಗಳನ್ನು ಬಸ್ಸಿನಿಂದ ದೂರವಿರಿಸಲು ಪೊಲೀಸರು ಹರಸಾಹಸ
ಪಟ್ಟರು. ಟ್ರೋಫಿಯನ್ನು ಹಿಡಿದ ಮೆಸ್ಸಿ ಹಾಗೂ ಆಟಗಾರರು ಜನರತ್ತ ಕೈಬೀಸುತ್ತಾ ಸಾಗಿದರು. 11 ಕಿಲೊ ಮೀಟರ್ ದೂರವನ್ನು ಪ್ರಯಾಣಿಸಲು ಬಸ್ಸು ಸುಮಾರು ಒಂದು ತಾಸು ತೆಗೆದುಕೊಂಡಿತು. ದೃಶ್ಯವಾಹಿನಿಗಳು ಈ ದೃಶ್ಯವನ್ನು ನೇರಪ್ರಸಾರ
ಮಾಡಿದವು.

1986ರ ಬಳಿಕ ತಂಡವು ವಿಶ್ವಕಪ್ ಜಯಿಸಿದ ಸಂಭ್ರಮಾಚರಣೆಗಾಗಿ ಅರ್ಜೆಂಟೀನಾ ಅಧ್ಯಕ್ಷ ಆಲ್ಬರ್ಟೊ ಫರ್ನಾಂಡೆಜ್‌ ಮಂಗಳವಾರ ರಾಷ್ಟ್ರೀಯ ರಜೆ ಘೋಷಿಸಿದ್ದರು.

ಫ್ರಾನ್ಸ್ ಆಟಗಾರರಿಗೂ ಗೌರವ

ವಿಶ್ವಕಪ್ ರನ್ನರ್ಸ್ ಅಪ್ ಫ್ರಾನ್ಸ್ ಆಟಗಾರರಿಗೂ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಆಟಗಾರರು ಕತಾರ್‌ನಿಂದ ಸೋಮವಾರ ರಾತ್ರಿ 8 ಗಂಟೆಗೆ ಚಾರ್ಲ್ಸ್‌ ಡಿ ಗಾಲೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

‘ಈ ಸ್ವಾಗತದಿಂದ ಹೃದಯ ತುಂಬಿ ಬಂದಿದೆ‘ ಎಂದು ತಂಡದ ಫಾವರ್ಡ್‌ ಆಟಗಾರ ಮಾರ್ಕಸ್‌ ತುರಮ್‌ ಹೇಳಿದ್ದಾರೆ.

‘ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಲು ಇದು ಸದವಕಾಶ. ಭಾನುವಾರದ (ಫೈನಲ್ ಪಂದ್ಯದ ಸೋಲು) ನೋವಿಗೆ ಸಾಂತ್ವನದ ನುಡಿಗಳನ್ನು ಅವರಿಂದ ಕೇಳಬೇಕು‘ ಎಂದು ಫ್ರಾನ್ಸ್ ತಂಡದ ನಾಯಕ ಮತ್ತು ಗೋಲ್‌ಕೀಪರ್ ಹ್ಯುಗೊ ಲಾರಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.