ADVERTISEMENT

ಫ್ರೆಂಚ್‌ ಬಾಕ್ಸಿಂಗ್ ಟೂರ್ನಿ: ಪಂಗಲ್‌, ಸಂಜೀತ್‌ ಚಿನ್ನದ ಪಂಚ್‌

ಆಶಿಶ್‌ಕುಮಾರ್‌ಗೂ ಅಗ್ರಸ್ಥಾನ; ಕವಿಂದರ್‌ಗೆ ಬೆಳ್ಳಿ

ಪಿಟಿಐ
Published 31 ಅಕ್ಟೋಬರ್ 2020, 10:43 IST
Last Updated 31 ಅಕ್ಟೋಬರ್ 2020, 10:43 IST
ಅಮಿತ್ ಪಂಗಲ್‌–ಪಿಟಿಐ ಸಂಗ್ರಹ ಚಿತ್ರ
ಅಮಿತ್ ಪಂಗಲ್‌–ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ದಿಟ್ಟ ಸಾಮರ್ಥ್ಯ ತೋರಿದ ವಿಶ್ವ ಬೆಳ್ಳಿ ಪದಕ ವಿಜೇತ ಭಾರತದ ಅಮಿತ್‌ ಪಂಗಲ್‌ (52 ಕೆಜಿ ವಿಭಾಗ) ಹಾಗೂ ಸಂಜೀತ್‌ (91 ಕೆಜಿ) ಅವರು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಅಲೆಕ್ಸಿಸ್‌ ವ್ಯಾಸ್ಟಿನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಶಿಶ್‌ಕುಮಾರ್‌ ಕೂಡ ಚಿನ್ನಕ್ಕೆ ಮುತ್ತಿಟ್ಟರು.

ಏಷ್ಯನ್‌ ಕ್ರೀಡಾಕೂಟದಲ್ಲೂ ಚಾಂಪಿಯನ್‌ ಆಗಿರುವ ಅಮಿತ್‌ ಶುಕ್ರವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ 3–0ಯಿಂದ ಅಮೆರಿಕದ ರೆನೆ ಅಬ್ರಹಾಂ ಅವರನ್ನು ಪರಾಭವಗೊಳಿಸಿದರು. ಅಂತಿಮ ಸುತ್ತಿನ ಇನ್ನೊಂದು ಬೌಟ್‌ನಲ್ಲಿ ಸಂಜೀತ್‌ ಅವರು ಫ್ರಾನ್ಸ್‌ನ ಸೋಹೆಬ್‌ ಬೌಫಿಯಾ ಅವರನ್ನು ಮಣಿಸಿದರು.

ಆಶಿಶ್‌ಕುಮಾರ್ ಅವರ ಎದುರಾಳಿ ಅಮೆರಿಕದ ಜೋಸೆಫ್‌ ಜೆರೋಮ್‌ ಹಿಕ್ಸ್ ಗಾಯದ ಕಾರಣ ಫೈನಲ್‌ ಬೌಟ್‌ನಿಂದ ಹಿಂದೆ ಸರಿದರು. ಇದರೊಂದಿಗೆ ಭಾರತದ ಬಾಕ್ಸರ್‌ಗೆ ವಾಕ್‌ಓವರ್ ಮೂಲಕ ಅಗ್ರಸ್ಥಾನ ಒಲಿಯಿತು.

ADVERTISEMENT

ಫೈನಲ್‌ಗೆ ಲಗ್ಗೆಯಿಟ್ಟಿದ್ದ ಕವಿಂದರ್‌ ಸಿಂಗ್‌ ಬಿಷ್ತ್‌ (57 ಕೆಜಿ) ಅವರು 1–2ರಿಂದ ಸ್ಥಳೀಯ ಬಾಕ್ಸರ್‌ ಸ್ಯಾಮ್ಯುಯೆಲ್‌ ಕಿಸ್ತೊಹರಿ ಎದುರು ಸೋತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಸತೀಶ್‌ ಕುಮಾರ್ (+91 ಕೆಜಿ), ಶಿವ ಥಾಪಾ (63 ಕೆಜಿ) ಹಾಗೂ ಸುಮಿತ್ ಸಂಗ್ವಾನ್‌ (81 ಕೆಜಿ) ಟೂರ್ನಿಯಲ್ಲಿ ಈಗಾಗಲೇ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಮಾರ್ಚ್‌ನಲ್ಲಿ ಜೋರ್ಡಾನ್‌ನಲ್ಲಿ ನಡೆದ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಬಳಿಕ ಭಾರತದ ಬಾಕ್ಸರ್‌ಗಳು ಸ್ಪರ್ಧಿಸಿದ ಮೊದಲ ಟೂರ್ನಿ ಇದಾಗಿತ್ತು. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಾಕ್ಸರ್‌ಗಳ ತರಬೇತಿ ಹಾಗೂ ಸ್ಪರ್ಧೆಗಳಿಗೆ ತಡೆಯುಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.