ಟೊರಂಟೊ, ಕೆನಡಾ: ಭಾರತದ ಉದಯೋನ್ಮುಖ ಆಟಗಾರ್ತಿ ಅನಾಹತ್ ಸಿಂಗ್ ಅವರು ಹಾಲಿ ಚಾಂಪಿಯನ್ ಟಿನ್ನೆ ಜೀಲಿಸ್ ಅವರಿಗೆ ಆಘಾತ ನೀಡಿ ಕೆನಡಿಯನ್ ಓಪನ್ ಸ್ಕ್ವಾಷ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.
ಮಂಗಳವಾರ ತಡರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಅನಾಹತ್ 3–0ಯಿಂದ (12–10, 11–9, 11–9) ಬೆಲ್ಜಿಯಂನ ಎರಡನೇ ಶ್ರೇಯಾಂಕದ ಆಟಗಾರ್ತಿಯನ್ನು ಸೋಲಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 43ನೇ ಕ್ರಮಾಂಕದಲ್ಲಿರುವ ಅನಾಹತ್ ಅವರು 36 ನಿಮಿಷ ನಡೆದ ಪಂದ್ಯದಲ್ಲಿ 7ನೇ ಕ್ರಮಾಂಕದ ಜೀಲಿಸ್ ಎದುರು ಸ್ಪಷ್ಟ ಮೇಲುಗೈ ಸಾಧಿಸಿದರು. ಈ ಮೂಲಕ, ಅಗ್ರ 10ರೊಳಗಿನ ಆಟಗಾರ್ತಿಯ ವಿರುದ್ಧ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದರು. ಭಾರತದ ಆಟಗಾರ್ತಿ ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಗೀನಾ ಕೆನಡಿ (ಇಂಗ್ಲೆಂಡ್) ಅವರನ್ನು ಎದುರಿಸಲಿದ್ದಾರೆ.
ಅಮೋಘ ಲಯದಲ್ಲಿರುವ 17 ವರ್ಷ ವಯಸ್ಸಿನ ಅನಾಹತ್ ಅವರು ಪ್ರಿಕ್ವಾರ್ಟರ್‌ನಲ್ಲಿ ಫ್ರಾನ್ಸ್‌ನ ಮೆಲೀಸಾ ಆ್ಯಲ್ವ್ಸ್ ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.