ADVERTISEMENT

ಚೆಸ್‌ ಅಕಾಡೆಮಿ ಆರಂಭಿಸಿದ ವಿಶ್ವನಾಥನ್ ಆನಂದ್

ಪಿಟಿಐ
Published 10 ಡಿಸೆಂಬರ್ 2020, 12:36 IST
Last Updated 10 ಡಿಸೆಂಬರ್ 2020, 12:36 IST
ವಿಶ್ವನಾಥನ್ ಆನಂದ್‌
ವಿಶ್ವನಾಥನ್ ಆನಂದ್‌   

ಚೆನ್ನೈ: ಐದು ಬಾರಿಯ ವಿಶ್ವ ಚಾಂಪಿಯನ್‌ ಭಾರತದ ವಿಶ್ವನಾಥನ್ ಆನಂದ್‌ ಅವರು ಯುವ ಪಟುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಚೆಸ್‌ ಅಕಾಡೆಮಿ ಆರಂಭಿಸಿದ್ದಾರೆ. ಇದಕ್ಕಾಗಿ ಅವರು ವೆಸ್ಟ್‌ಬ್ರಿಜ್‌ ಕ್ಯಾಪಿಟಲ್‌ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ.

ವೆಸ್ಟ್‌ಬ್ರಿಜ್‌–ಆನಂದ್ ಚೆಸ್‌ ಅಕಾಡೆಮಿ (ಡಬ್ಲ್ಯುಎಸಿಎ) ಹೆಸರಿನ ಅಕಾಡೆಮಿಯು ದೇಶದ ಐದು ಮಂದಿ ಉದಯೋನ್ಮುಖ ಪಟುಗಳನ್ನು ಆಯ್ಕೆ ಮಾಡುತ್ತದೆ. ಇವರು ಆನಂದ್ ಅವರಿಂದ ತರಬೇತಿ ಪಡೆಯಲಿದ್ದಾರೆ. ಡಬ್ಲ್ಯುಎಸಿಎಯಿಂದ ತರಬೇತಿ ಹಾಗೂ ಶಿಷ್ಯವೇತನ ಪಡೆಯಲಿರುವ ಮೊದಲ ಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 15 ವರ್ಷದ ಆರ್‌. ಪ್ರಗ್ನಾನಂದ, ನಿಹಾಲ್ ಸರಿನ್‌ (16), ರೌನಕ್ ಸಾಧ್ವಾನಿ (15), ಡಿ.ಗುಕೇಶ್‌ (14) ಹಾಗೂ ಪ್ರಗ್ನಾನಂದ ಅವರ ಸಹೋದರಿ ಆರ್‌. ವೈಶಾಲಿ (19) ಇದರಲ್ಲಿದ್ದಾರೆ.

ಒಪ್ಪಂದದ ಅನ್ವಯ, ಪ್ರತಿ ವರ್ಷ ಅರ್ಹ ಚೆಸ್‌ ಪ‍ಟುಗಳನ್ನು ಗುರುತಿಸಿ, ವಿಶ್ವ ರ‍್ಯಾಂಕಿಂಗ್‌ನಲ್ಲಿ ಪ್ರಮುಖ ಸ್ಥಾನ ಪಡೆಯುವಂತೆ ತರಬೇತುಗೊಳಿಸಲಾಗುತ್ತದೆ. ಅವರಿಗೆ ಶಿಷ್ಯವೇತನವನ್ನೂ ನೀಡಲಾಗುತ್ತದೆ.

ADVERTISEMENT

‘ಕಳೆದ 20 ವರ್ಷಗಳಲ್ಲಿ ಚೆಸ್‌ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಕಂಡುಬಂದಿದೆ. ಸೂಕ್ತ ಮಾರ್ಗದರ್ಶನ ಸಿಕ್ಕರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಹಾಗೂ ವಿಶ್ವ ಚಾಂಪಿಯನ್‌ ಕೂಡ ಆಗಬಲ್ಲ ಹಲವು ಪ್ರತಿಭೆಗಳು ನಮ್ಮ ದೇಶದಲ್ಲಿವೆ‘ ಎಂದು ಅಕಾಡೆಮಿ ಸ್ಥಾಪನೆ ಕುರಿತು ಆನಂದ್ ಹೇಳಿದರು.

ಕೋವಿಡ್‌–19 ಪಿಡುಗಿನ ಕಾರಣ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತರಬೇತಿ ಚಟುವಟಿಕೆಗಳನ್ನು ಸದ್ಯ ಆನ್‌ಲೈನ್‌ ಮೂಲಕ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.