ADVERTISEMENT

ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿ: ಫೈನಲ್‌ಗೆ ಭಾರತ ಮಹಿಳಾ ತಂಡ

ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಪುರುಷರ ತಂಡ

ಪಿಟಿಐ
Published 24 ಏಪ್ರಿಲ್ 2021, 10:36 IST
Last Updated 24 ಏಪ್ರಿಲ್ 2021, 10:36 IST
ದೀಪಿಕಾ ಕುಮಾರಿ- ಪಿಟಿಐ ಚಿತ್ರ
ದೀಪಿಕಾ ಕುಮಾರಿ- ಪಿಟಿಐ ಚಿತ್ರ   

ಗ್ವಾಟೆಮಾಲಾ ಸಿಟಿ: ಸ್ಪೇನ್ ತಂಡವನ್ನು ಪರಾಭವಗೊಳಿಸಿದ ಭಾರತದ ಮಹಿಳಾ ರಿಕರ್ವ್ ತಂಡ, ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿಯಲ್ಲಿ ಫೈನಲ್‌ಗೆ ಕಾಲಿಟ್ಟಿತು. ಆದರೆ ಪುರುಷರ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿತು.

ಭಾರತ ಸದ್ಯ ಟೂರ್ನಿಯಲ್ಲಿ ನಾಲ್ಕು ಪದಕಗಳ ಮೇಲೆ ಕಣ್ಣಿಟ್ಟಿದೆ. ಆತನು ದಾಸ್ ಹಾಗೂ ದೀಪಿಕಾ ದಂಪತಿ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ. ಅಲ್ಲದೆ ವೈಯಕ್ತಿಕ ವಿಭಾಗಗಳಲ್ಲೂ ಇಬ್ಬರೂ ನಾಲ್ಕರ ಘಟ್ಟ ತಲುಪಿದ್ದಾರೆ.

ದೀಪಿಕಾ ಕುಮಾರಿ, ಅಂಕಿತಾ ಭಕತ್ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ಭಾರತದ ಮಹಿಳಾ ತಂಡವು ಸೆಮಿಫೈನಲ್‌ನಲ್ಲಿ 6–0ಯಿಂದ ಸ್ಪೇನ್‌ನ ಎಲಿಯಾ ಕ್ಯಾನಲೆಸ್‌, ಇನೆಸ್‌ ಡಿ ವಾಲೆಸ್ಕೊ ಹಾಗೂ ಲೆಯರೆ ಫರ್ನಾಂಡೀಸ್ ಇನ್ಫಾಂಟೆ ಎದುರು ಗೆದ್ದಿತು.

ADVERTISEMENT

2016ರಲ್ಲಿ ಶಾಂಘೈನಲ್ಲಿ ಕೊನೆಯ ಬಾರಿ ಮಹಿಳಾ ತಂಡ ಫೈನಲ್ ತಲುಪಿತ್ತು. ಭಾನುವಾರ ನಡೆಯುವ ಚಿನ್ನದ ಪದಕಸ ಸುತ್ತಿನಲ್ಲಿ ಭಾರತ ತಂಡವು ಮೆಕ್ಸಿಕೊ ಎದುರು ಸೆಣಸಲಿದೆ.

ಎಂಟರಘಟ್ಟದಲ್ಲಿ ಭಾರತದ ಮಹಿಳೆಯರು 6–0 ಅಂತರದಿಂದ ಆತಿಥೇಯ ಗ್ವಾಟೆಮಾಲಾ ಸಿಟಿ ತಂಡದ ಸವಾಲು ಮೀರಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ಎದುರೇ ಕಣಕ್ಕಿಳಿದಿದ್ದ ಭಾರತದ ಪುರುಷರ ತಂಡವೂ ಸಮಬಲ ಸಾಧಿಸಿತ್ತು. ಆದರೆ ಫಲಿತಾಂಶ ನಿರ್ಧರಿಸಲು ನಡೆದ ಶೂಟ್‌ ಆಫ್‌ನಲ್ಲಿ ನಿರಾಸೆ ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.