ಹಾಕಿ
ರಾಜಗೀರ್: ಪುರುಷರ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಒಮನ್ ತಂಡಗಳ ಸ್ಥಾನದಲ್ಲಿ ಬಾಂಗ್ಲಾದೇಶ ಮತ್ತು ಕಜಕಸ್ತಾನ ತಂಡಗಳು ಆಡಲಿವೆ. ಮಂಗಳವಾರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟೂರ್ನಿಯು ನಿಗದಿಯಂತೆ ಇದೇ 29 ರಿಂದ ಸೆಪ್ಟೆಂಬರ್ 7ರತನಕ ನಡೆಯಲಿದೆ.
ಆತಿಥೇಯ ಭಾರತವು, ಚೀನಾ, ಜಪಾನ್ ಮತ್ತು ಕಜಕಸ್ತಾನ ತಂಡಗಳೊಂದಿಗೆ ‘ಎ’ ಗುಂಪಿನಲ್ಲಿದೆ. ಹಾಲಿ ಚಾಂಪಿಯನ್ ಕೊರಿಯಾ, ಮಲೇಷ್ಯಾ, ಚೀನಾ ತೈಪಿ ಮತ್ತು ಬಾಂಗ್ಲಾದೇಶ ತಂಡಗಳು ‘ಬಿ’ ಗುಂಪಿನಲ್ಲಿವೆ.
ಎಂಟು ತಂಡಗಳ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡವು, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನಲ್ಲಿ ನಡೆಯಲಿರುವ 2026ರ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಲಿದೆ.
ಗುಂಪು ಹಂತದ ಪಂದ್ಯಗಳ ನಂತರ ಸೆ. 3 ರಿಂದ 6ರವರೆಗೆ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯಲಿವೆ. ಇದರಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ. ಫೈನಲ್ ಪಂದ್ಯ ಸೆ. 7ರಂದು ನಿಗದಿಯಾಗಿದೆ. ಸೂಪರ್ ಫೋರ್‌ನಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳ ನಡುವಣ ಪಂದ್ಯ ಮತ್ತು 5 ಮತ್ತು 6ನೇ ಸ್ಥಾನಕ್ಕೆ ಕ್ಲಾಸಿಫಿಕೇಷನ್ ಪಂದ್ಯವೂ ಅಂದೇ ನಡೆಯಲಿದೆ.
ಪಾಕ್ ತಂಡದ ಆಟಗಾರರಿಗೆ ವೀಸಾ ನೀಡುವುದಾಗಿ ಭಾರತ ಸರ್ಕಾರ ತಿಳಿಸಿತ್ತು. ಆದರೆ ಪಾಕಿಸ್ತಾನ ಹಾಕಿ ಫೆಡರೇಷನ್, ತಂಡದ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದಲ್ಲಿ ಆಡಲು ನಿರಾಕರಿಸಿತು. ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿಯ ನಂತರ ಪಾಕ್ ತಂಡದ ಪಾಲ್ಗೊಳ್ಳುವಿಕೆ ಅನಿಶ್ಚಿತವಾಗುಳಿದಿತ್ತು.
ಕೊರಿಯಾ ಈ ಟೂರ್ನಿಯ ಯಶಸ್ವಿ ತಂಡ ಎನಿಸಿದ್ದು, ಐದು ಬಾರಿ ಚಾಂಪಿಯನ್ ಆಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ ಮೂರು ಬಾರಿ ಪ್ರಶಸ್ತಿ ಗೆದ್ದಿವೆ. ಭಾರತ ಕೊನೆಯ ಬಾರಿ 2017ರಲ್ಲಿ ಢಾಕಾದಲ್ಲಿ 2–1 ರಿಂದ ಮಲೇಷ್ಯಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಜಕಾರ್ತಾದಲ್ಲಿ ನಡೆದ ಈ ಹಿಂದಿನ ಕೂಟದಲ್ಲಿ ಭಾರತ ಮೂರನೇ ಸ್ಥಾನ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.