ADVERTISEMENT

ಏಷ್ಯಾ ಕಪ್‌ ಹಾಕಿ: ಜಪಾನ್‌ ಎದುರು ರೋಚಕ ಜಯ, ಸೂಪರ್‌ ನಾಲ್ಕಕ್ಕೆ ಭಾರತ ಲಗ್ಗೆ

ಪಿಟಿಐ
Published 31 ಆಗಸ್ಟ್ 2025, 15:54 IST
Last Updated 31 ಆಗಸ್ಟ್ 2025, 15:54 IST
<div class="paragraphs"><p>ಭಾರತದ ಆಟಗಾರರ ಸಂಭ್ರಮ</p></div>

ಭಾರತದ ಆಟಗಾರರ ಸಂಭ್ರಮ

   

–ಎಕ್ಸ್‌ ಚಿತ್ರ

ರಾಜಗೀರ್‌, ಬಿಹಾರ: ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಭಾನುವಾರ ಜಪಾನ್ ಎದುರು ರೋಚಕ ಗೆಲುವು ಸಾಧಿಸಿತು. ಅದರೊಂದಿಗೆ ಸೂಪರ್ ಫೋರ್ ಹಂತಕ್ಕೂ ಮುನ್ನಡೆಯಿತು. 

ADVERTISEMENT

ಶುಕ್ರವಾರ ನಡೆದ  ಮೊದಲ ಪಂದ್ಯದಲ್ಲಿ ತನಗಿಂತ ಕೆಳಕ್ರಮಾಂಕದ ಚೀನಾ ಎದುರು ಪ್ರಯಾಸದಾಯಕ ಜಯ ಸಾಧಿಸಸಿದ್ದ  ಹರ್ಮನ್‌ ಬಳಗವು, ಜಪಾನ್‌ ಎದುರು ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು.  3–2ರಿಂದ ರೋಚಕ ಜಯ ಸಾಧಿಸಿತು. ನಾಯಕನಿಗೆ ತಕ್ಕ ಆಟವಾಡಿದ ಹರ್ಮನ್ ಎರಡು ಗೋಲು ಹೊಡೆದು ಗೆಲುವಿನ ರೂವಾರಿಯಾದರು.

ಪಂದ್ಯದಲ್ಲಿ ಮನದೀಪ್‌ ಸಿಂಗ್‌ ಅವರು 4ನೇ ನಿಮಿಷದಲ್ಲಿ ಗೋಲು ಬಾರಿಸಿ ಆತಿಥೇಯ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಹರ್ಮನ್‌ಪ್ರೀತ್‌ ಅವರು, 5ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲು ದಾಖಲಿಸಲು ಸಮರ್ಥವಾಗಿ ಬಳಸಿಕೊಂಡರು. 46ನೇ ನಿಮಿಷದಲ್ಲಿ ದೊರೆತ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿಯೂ ಗೋಲು ಗಳಿಸಿ, ಭಾರತದ ಮುನ್ನಡೆಯನ್ನು 3–1ಕ್ಕೆ ಹಿಗ್ಗಿಸಿದರು. ಅವರು ಚೀನಾ ಎದುರಿನ ಪಂದ್ಯದಲ್ಲಿ ಗೋಲ್‌ಗಳ ಹ್ಯಾಟ್ರಿಕ್‌ ಸಾಧಿಸಿದ್ದರು.

ಜಪಾನ್‌ ತಂಡದ ಕೊಸಿ ಕವಾಬೆ ಅವರು (38ನೇ ನಿ ಹಾಗೂ 58ನೇ ನಿ) ಪ್ರತಿರೋಧ ತೋರಿದರಾದರೂ, ಅವರ ಆಟಕ್ಕೆ ಗೆಲುವು ಒಲಿಯಲಿಲ್ಲ. ಅದರೊಂದಿಗೆ, ಭಾರತ ತಂಡವು 6 ಅಂಕಗಳೊಂದಿಗೆ ಎ ಗುಂಪಿನ ಅಗ್ರಸ್ಥಾನಕ್ಕೇರಿದ್ದು ಸೂಪರ್‌ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆಯಿತು. ತಲಾ ಒಂದು ಪಂದ್ಯ ಗೆದ್ದಿರುವ ಚೀನಾ ಹಾಗೂ ಜಪಾನ್‌ ತಂಡಗಳ ನಡುವೆ ಸೋಮವಾರ ಪಂದ್ಯ ನಡೆಯಲಿದ್ದು, ಜಯಿಸಿದ ತಂಡವು ಸೂಪರ್‌ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಲಿದೆ.

ಭಾರತ ತಂಡವು ಸೋಮವಾರ ನಡೆಯಲಿರುವ ಗುಂಪು ಹಂತದ ತನ್ನ ಅಂತಿಮ ಪಂದ್ಯದಲ್ಲಿ ಕಜಾಕಸ್ತಾನ ಎದುರು ಸೆಣಸಲಿದೆ. 

ಭಾರತದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ಪಾಠಕ್‌ಗೆ 150ನೇ ಪಂದ್ಯ
ಭಾರತ ತಂಡದ ಗೋಲ್‌ಕೀಪರ್‌ ಕೃಷನ್ ಬಹದ್ದೂರ್‌ ಪಾಠಕ್‌ ಅವರು ವೃತ್ತಿಜೀವನದಲ್ಲಿ 150ನೇ ಅಂತರರಾಷ್ಟ್ರೀಯ ಪಂದ್ಯ ಆಡಿದರು. ಪಂದ್ಯ ಆರಂಭಕ್ಕೂ ಮೊದಲು ಅವರಿಗೆ ಹಾಕಿ ಇಂಡಿಯಾದ ವತಿಯಿಂದ ‘150’ ಸಂಖ್ಯೆಯ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ  ಗೌರವಿಸಲಾಯಿತು.

ಚೀನಾಗೆ ಸುಲಭ ಜಯ

ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ಚೀನಾ ತಂಡವು ಕಜಾಕಸ್ತಾನ ಎದುರು 13–1 ಗೋಲುಗಳಿಂದ ಸುಲಭದ ಜಯ ದಾಖಲಿಸಿತು. ಅದರೊಂದಿಗೆ ಸೂಪರ್‌ ನಾಲ್ಕರ ಹಂತ ಪ್ರವೇಶಿಸುವ ಅವಕಾಶವನ್ನೂ ಜೀವಂತವಾಗಿರಿಸಿಕೊಂಡಿತು.

ಪಂದ್ಯ ಆರಂಭಗೊಂಡ ಕೇವಲ 12 ಸೆಕೆಂಡುಗಳಲ್ಲೇ ಕಜಾಕಸ್ತಾನಕ್ಕೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಈ ಅವಕಾಶವನ್ನು ಅಜಿಮ್ಟೆ ದುಸೆಂಗಾಜಿ ಅವರು ಗೋಲಾಗಿ ಪರಿವರ್ತಿಸಿದ್ದು ಬಿಟ್ಟರೆ ಉಳಿದ ಅವಧಿಯಲ್ಲಿ ಕಜಾಕಸ್ತಾನ ನೀರಸ ಆಟವಾಡಿತು. ಚೀನಾ ಗೋಲುಗಳ ಸುರಿಮಳೆಯನ್ನೇ ಸುರಿಸಿತು.

ಚೀನಾ ಪರ ಯುವಾನ್‌ಲಿನ್‌ ಲು ಅವರು (31ನೇ 42ನೇ ಹಾಗೂ 44ನೇ ನಿ.) ಮೂರು ಗೋಲು ಹೊಡೆದರೆ ದು ಶಿಹಾಒ (10ನೇ ಹಾಗೂ 53ನೇ ನಿ.) ಶಾಂಗ್ಲಿಯಾಂಗ್‌ ಲಿನ್‌ (15ನೇ ಹಾಗೂ 39ನೇ ನಿ.) ಬೆನೈ ಶೆನ್‌ (29ನೇ ಹಾಗೂ 56ನೇ ನಿ.) ಮತ್ತು ಷಿಯೊಲಾಂಗ್‌ ಗುಒ (41ನೇ ಹಾಗೂ 58 ನೇ ನಿ.) ತಲಾ ಎರಡು ಗೋಲು ಗಳಿಸಿದರು. ಕ್ವಿಜಿನ್ ಶೆನ್‌ (13ನೇ ನಿ.) ಹಾಗೂ ಜೀಶೆಂಗ್‌ ಗಾವೊ(33ನೇ ನಿ.) ತಲಾ ಒಂದು ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.