ADVERTISEMENT

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸೆಮಿಗೆ ಮೀನಾಕ್ಷಿ, ಪ್ರೀತಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 16:09 IST
Last Updated 5 ನವೆಂಬರ್ 2022, 16:09 IST
ಮೀನಾಕ್ಷಿ
ಮೀನಾಕ್ಷಿ   

ನವದೆಹಲಿ: ಭಾರತದ ಮೀನಾಕ್ಷಿ ಮತ್ತು ಪ್ರೀತಿ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿ, ಪದಕ ಖಚಿತಪಡಿಸಿಕೊಂಡರು.

ಶನಿವಾರ ನಡೆದ ಮಹಿಳೆಯರ 52 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಮೀನಾಕ್ಷಿ 4–1 ರಲ್ಲಿ ಫಿಲಿಪ್ಪೀನ್ಸ್‌ನ ಐರಿಷ್‌ ಮಗ್ನೊ ಅವರನ್ನು ಮಣಿಸಿದರು. 57 ಕೆ.ಜಿ. ವಿಭಾದಲ್ಲಿ ಪ್ರೀತಿ 5–0 ರಲ್ಲಿ ತರ್ದಿಬೆಕೊವಾ ಸಿತೋರಾ ವಿರುದ್ಧ ಗೆದ್ದರು.

ನ.9 ರಂದು ನಡೆಯಲಿರುವ ಸೆಮಿ ಹಣಾಹಣಿಯಲ್ಲಿ ಮೀನಾಕ್ಷಿ, ಮಂಗೋಲಿಯದ ಲುತ್‌ಸೈಖನ್ ಅಲ್ತನ್‌ಸೆಸೆಗ್‌ ವಿರುದ್ಧವೂ; ಪ್ರೀತಿ, ಜಪಾನ್‌ನ ಐರಿ ಸೆನಾ ಎದುರೂ ಪೈಪೋಟಿ ನಡೆಸುವರು.

ADVERTISEMENT

54 ಕೆ.ಜಿ ವಿಭಾಗದಲ್ಲಿ ಸಾಕ್ಷಿ ನಿರಾಸೆ ಅನುಭವಿಸಿದರು. ಅವರು 0–5 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಚೀನಾ ತೈಪೆಯ ಸಿಯಾವೊ–ವೆನ್‌ ಹುವಾಂಗ್‌ ಎದುರು ಪರಾಭವಗೊಂಡರು.

ಅನಂತ ಚೋಪಡೆ ಪುರುಷರ 54 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಶುಕ್ರವಾರ ನಡೆದ ಹಣಾಹಣಿಯಲ್ಲಿ ಅವರು 5–0 ರಲ್ಲಿ ಜಪಾನ್‌ನ ತನಕ ಶೊಗೊ ವಿರುದ್ಧ ಗೆದ್ದರು. 60 ಕೆ.ಜಿ ವಿಭಾಗದಲ್ಲಿ ಎತಾಶ್‌ ಖಾನ್ 2–3 ರಲ್ಲಿ ಥಾಯ್ಲೆಂಡ್‌ನ ಖುನಟಿಪ್ ಪಿನಚ್‌ ಎದುರು ಸೋತರು.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ ಪರ್ವೀನ್‌ (63 ಕೆ.ಜಿ) ಮತ್ತು ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್‌ (75 ಕೆ.ಜಿ) ಅವರು ಭಾನುವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.