ADVERTISEMENT

ಹಾಕಿಯಲ್ಲಿ ಭಾರತಕ್ಕೆ ಹ್ಯಾಟ್ರಿಕ್‌; ಚಾಂಪಿಯನ್ನರಿಗೆ ಸೋಲು

ಗುರುಜೀತ್ ಕೌರ್‌ಗೆ ಎರಡು ಗೋಲು; ದಕ್ಷಿಣ ಕೊರಿಯಾಗೆ 1–4ರಿಂದ ಸೋಲು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 17:24 IST
Last Updated 25 ಆಗಸ್ಟ್ 2018, 17:24 IST
ದಕ್ಷಿಣ ಕೊರಿಯಾ ಎದುರು ಗೋಲು ಗಳಿಸಿದ ನಂತರ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ
ದಕ್ಷಿಣ ಕೊರಿಯಾ ಎದುರು ಗೋಲು ಗಳಿಸಿದ ನಂತರ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ಜಕಾರ್ತ: ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯಾವನ್ನು 4–1 ಗೋಲುಗಳಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡದವರು ಹ್ಯಾಟ್ರಿಕ್‌ ಜಯ ಸಾಧಿಸಿದರು. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು.

ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಉಭಯ ತಂಡದ ಆಟಗಾರ್ತಿಯರು ರೋಚಕ ಪೈಪೋಟಿ ನಡೆಸಿದರು. 16ನೇ ನಿಮಿಷದಲ್ಲಿ ನವನೀತ್ ಕೌರ್ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಸಾಧಿಸಿತು. 20ನೇ ನಿಮಿಷದಲ್ಲಿ ಯೂರಿಮ್ ಲೀ ಅವರ ಗೋಲಿನ ಮೂಲಕ ಎದುರಾಳಿ ತಂಡದವರು ಸಮಬಲ ಸಾಧಿಸಿದರು.

ಕೊನೆಯ ಕ್ವಾರ್ಟರ್‌ ವರೆಗೂ 1–1ರ ಸಮಬಲದೊಂದಿಗೆ ಎರಡೂ ತಂಡದವರು ಕಾದಾಡಿದರು. 54ನೇ ನಿಮಿಷದಲ್ಲಿ ಆಕ್ರಮಣಕ್ಕೆ ಒತ್ತು ನೀಡಿದ ಭಾರತ ಮೂರು ನಿಮಿಷಗಳಲ್ಲಿ ಮೂರು ಗೋಲು ಗಳಿಸಿ ಚಾಂಪಿಯನ್ನರನ್ನು ಕಂಗೆಡಿಸಿತು.

ADVERTISEMENT

ಗುರುಜೀತ್‌ ಕೌರ್‌ 54 ಮತ್ತು 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರೆ ವಂದನಾ ಕಟಾರಿಯಾ 56ನೇ ನಿಮಿಷದಲ್ಲಿ ಗೋಲು ಗಳಿಸಿ ಭರ್ಜರಿ ಜಯಕ್ಕೆ ಕಾರಣರಾದರು.

ಈ ಜಯದೊಂದಿಗೆ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತು ಪಾಯಿಂಟ್‌ಗಳೊಂದಿಗೆ ಭಾರತ ಅಗ್ರ ಸ್ಥಾನಕ್ಕೇರಿತು. ಆರು ಪಾಯಿಂಟ್‌ಗಳೊಂದಿಗೆ ದಕ್ಷಿಣ ಕೊರಿಯಾ ಎರಡನೇ ಸ್ಥಾನ ಮತ್ತು ಮೂರು ಪಾಯಿಂಟ್‌ಗಳೊಂದಿಗೆ ಥಾಯ್ಲೆಂಡ್‌ ಮೂರನೇ ಸ್ಥಾನ ಗಳಿಸಿದೆ.

ಭಾರತದ ಗುಂಪು ಹಂತದ ಕೊನೆಯ ಪಂದ್ಯ ನಾಳೆ (ಸೋಮವಾರ) ಥಾಯ್ಲೆಂಡ್ ವಿರುದ್ಧ ನಡೆಯಲಿದೆ. ಪುರುಷರ ‘ಎ’ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ ಭಾನುವಾರ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.