ADVERTISEMENT

ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌: ಆಕೃತಿಗೆ ಬೆಳ್ಳಿ, ಅಂಜುಮ್‌ಗೆ ಕಂಚು

ಪಿಟಿಐ
Published 10 ಫೆಬ್ರುವರಿ 2026, 13:47 IST
Last Updated 10 ಫೆಬ್ರುವರಿ 2026, 13:47 IST
   

ನವದೆಹಲಿ: ಭಾರತದ ಆಕೃತಿ ದಹಿಯಾ ಮತ್ತು ಅಂಜುಮ್ ಮೌದ್ಗಿಲ್ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಮಂಗಳವಾರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.

ಕಜಾಕಸ್ತಾನದ ಶೂಟರ್ ಸೋಫಿಯಾ ಶುಲ್ಝೆಂಕೊ ಅವರು ಕರ್ನಿ ಸಿಂಗ್ ರೇಂಜ್‌ನಲ್ಲಿ ಚಿನ್ನ ಗೆಲ್ಲುವ ಮೊದಲು ನೂತನ ವಿಶ್ವದಾಖಲೆ ಸ್ಥಾಪಿಸಿದರು.

35 ಗುರಿಯತ್ನಗಳಿರುವ ಫೈನಲ್‌ನಲ್ಲಿ ಸೋಫಿಯಾ 358.2 ಸ್ಕೋರ್ ದಾಖಲಿಸಿದರು. ಅವರಿಗಿಂತ ನಾಲ್ಕು ಪಾಯಿಂಟ್‌ ಹಿಂದೆಬಿದ್ದ ಆಕೃತಿ (354) ಬೆಳ್ಳಿ ಗೆದ್ದರು. ಮೂರನೇ ಸ್ಥಾನ ಪಡೆದ ಅಂಜುಮ್ 340.4 ಸ್ಕೋರ್ ದಾಖಲಿಸಿದರು.

ADVERTISEMENT

ಸೋಫಿಯಾ ಈ ಹಾದಿಯಲ್ಲಿ ಇನ್ನೂ ಮೂರು– ವಿಶ್ವ ಜೂನಿಯರ್, ಏಷ್ಯನ್ ಮತ್ತು ಏಷ್ಯನ್ ಜೂನಿಯರ್– ದಾಖಲೆಗಳನ್ನು ಸ್ಥಾಪಿಸಿದರು.

ಜೂನಿಯರ್ ಮಹಿಳೆಯರ 3ಪಿ ಫೈನಲ್‌ನಲ್ಲಿ ಭಾರತದ ಪ್ರಾಚಿ ಗಾಯಕವಾಡ್ 353.4 ಸ್ಕೋರ್‌ನೊಡನೆ ವಿಜೇತರಾದರು. ಕಜಾಕಸ್ತಾನದ 14 ವರ್ಷ ವಯಸ್ಸಿನ ಪ್ರತಿಭೆ ತೊಮಿರಿಸ್ ಅಮನೋವಾ 351.4 ಸ್ಕೋರ್‌ನೊಡನೆ ಬೆಳ್ಳಿ ಮತ್ತು ಭಾರತದ ಅನುಷ್ಕಾ ತೋಕೂರ್ (341.1) ಕಂಚಿನ ಪಕದ ಗೆದ್ದರು. ಪ್ರಾಚಿ, ಅನುಷ್ಕಾ ಮತ್ತು ಹೆಝೆಲ್ ಅವರಿದ್ದ ಭಾರತ ತಂಡ ಒಟ್ಟು 1748 ಪಾಯಿಂಟ್‌ಗಳೊಡನೆ ಟೀಮ್ ಚಿನ್ನ ಸಹ ಗೆದ್ದಿತು.

ಮಹಿಳೆಯರ ರೈಫಲ್ 3ಪಿ ತಂಡ ಸ್ಪರ್ಧೆಯಲ್ಲಿ ಕಜಾಕಸ್ಥಾನ ತಂಡ, ಆತಿಥೇಯ ತಂಡವನ್ನು 4 ಪಾಯಿಂಟ್‌ಗಳಿಂದ ಹಿಂದೆಹಾಕಿ ಚಿನ್ನ ಗೆದ್ದಿತು. ಕಜಾಕ್ ತಂಡ ಒಟ್ಟು 1760 ಪಾಯಿಂಟ್ಸ್ ಕಲೆಹಾಕಿತು.

ಭಾರತ ಒಟ್ಟು 39 ಚಿನ್ನ, 15 ಬೆಳ್ಳಿ ಮತ್ತು 12 ಕಚಿನ ಪದಕಗಳನ್ನು ಗೆದ್ದು, ಪದಕಪಟ್ಟಿಯಲ್ಲಿ ಇತರ ತಂಡಗಳಿಗಿಂತ ಬಹಳ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.