
ನವದೆಹಲಿ: ಒಲಿಂಪಿಯನ್ ಮನು ಭಾಕರ್ ಅವರು ಏಷ್ಯಾ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು. ವಿಯೆಟ್ನಾಂನ ಎನ್‌ಗುಯೆನ್ ಥುಯ್ ತ್ರಾಂಗ್ ಸ್ವರ್ಣ ಗೆದ್ದರೆ, ಇಶಾ ಸಿಂಗ್ ಕಂಚು ತಮ್ಮದಾಗಿಸಿಕೊಂಡರು.
ನಿಖರ ಗುರಿಯಿಡುವಲ್ಲಿ ಯಶಸ್ವಿಯಾದ ಮನು ಹಾಗೂ ಎನ್‌ಗುಯೆನ್ ಫೈನಲ್ ಸುತ್ತಿನಲ್ಲಿ ತಲಾ 35 ಅಂಕ ಗಳಿಸಿದರು. ಹೀಗಾಗಿ, ವಿಜೇತರ ನಿರ್ಣಯಕ್ಕೆ ಶೂಟ್–ಆಫ್ ಸ್ಪರ್ಧೆ ನಡೆಸಲಾಯಿತು. ಎನ್‌ಗುಯೆನ್ 5ರಲ್ಲೂ ಯಶಸ್ವಿಯಾದರೆ, ಮನು 4ರಲ್ಲಿ ಯಶಸ್ವಿಯಾದರು.
589 ಅಂಕಗಳೊಂದಿಗೆ ಕ್ವಾಲಿಫಿಕೇಶನ್ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದಿದ್ದ ಇಶಾ ಸಿಂಗ್ ಫೈನಲ್‌ನಲ್ಲಿ 30 ಅಂಕ ಗಳಿಸಿದರು. ಭಾರತದ ಮತ್ತೊಬ್ಬ ಶೂಟರ್ ರಿದಮ್ ಸಂಗ್ವಾನ್ (27) ನಾಲ್ಕನೇ ಸ್ಥಾನ ಪಡೆದರು.
ಮನು, ಇಶಾ ಹಾಗೂ ರಿದಮ್ ಅವರು ಟೀಮ್ ವಿಭಾಗದಲ್ಲಿ ಸ್ವರ್ಣದ ಪದಕ (ಒಟ್ಟು 1,751 ಅಂಕ) ತಮ್ಮದಾಗಿಸಿಕೊಂಡರು. ತೈವಾನ್ (1,735) ಹಾಗೂ ವಿಯೆಟ್ನಾಂ (1,729) ಕ್ರಮವಾಗಿ ರಜತ ಹಾಗೂ ಕಂಚು ಜಯಿಸಿದವು.
ಜೂನಿಯರ್ ಮಹಿಳೆಯರ 25 ಮೀ. ಪಿಸ್ತೂಲ್‌ನಲ್ಲಿ ಭಾರತದ ನಾಮ್ಯ ಕಪೂರ್ ಚಿನ್ನಕ್ಕೆ ಕೊರಳೊಡ್ಡಿದರು. ಇಂಡೊನೇಷ್ಯಾದ ರಿಹಾದತ್ ಅಸೀಫಾ ಬೆಳ್ಳಿ ಗೆದ್ದರೆ, ಅಂಜಲಿ ಭಾಗವತ್ ಕಂಚು ಜಯಿಸಿದರು. ಭಾರತದ ಶೂಟರ್‌ಗಳು ಟೀಮ್ ವಿಭಾಗದಲ್ಲಿಯೂ ಪ್ರಶಸ್ತಿ ಗೆದ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.