
ಶೂಟಿಂಗ್
ನವದೆಹಲಿ: ಹಾಲಿ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಮತ್ತು ವಿಶ್ವಕಪ್ ವಿಜೇತೆ ಸುರುಚಿ ಸಿಂಗ್ ಅವರಿದ್ದ ಭಾರತದ ಮಿಶ್ರ ಡಬಲ್ಸ್ ತಂಡವು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರುವಾರ ಬೆಳ್ಳಿ ಪದಕಕ್ಕೆ ‘ಗುರಿಯಿಡುವಲ್ಲಿ’ ಯಶಸ್ವಿಯಾಯಿತು.
ಎಡಗೈ ಶೂಟರ್ ರಶ್ಮಿಕಾ ಸೆಹಲ್ ಮತ್ತು ವಂಶಿಕಾ ಚೌಧರಿ ಅವರು ಮಹಿಳೆಯರ ಜೂನಿಯರ್ ವಿಭಾಗದಲ್ಲಿ, ಯೂತ್ ವಿಭಾಗದಲ್ಲಿ ಪ್ರಿಯಾಂಶಿ ಪೂರ್ವ ಮತ್ತು ಚಹೆಕ್ ಕೊಹ್ಲಾ ಅವರು ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು.
ಭಾರತ ಎರಡನೇ ದಿನದ ಕೊನೆಗೆ ಒಟ್ಟು 10 ಚಿನ್ನ, ಐದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದುಕೊಂಡಿದ್ದು ಎರಡನೇ ಸ್ಥಾನದಲ್ಲಿರುವ ಉಜ್ಬೇಕಿಸ್ತಾನಕ್ಕಿಂತ ಬಹಳ ಮುಂದಿದೆ. ಉಜ್ಬೇಕಿಸ್ತಾನ ಮೂರು ಚಿನ್ನದ ಪದಕಗಳನ್ನು ಜಯಿಸಿದೆ.
ಎರಡನೇ ದಿನ ಉಜ್ಬೇಕಿಸ್ತಾನದ ಏಕೈಕ ಚಿನ್ನ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಬಂದಿತು. ನಿಗಿನಾ ಸೈದುಕುಲೋವಾ– ಮುಕಮ್ಮದ್ ಕಮಲೋವ್ ಅವರು 481.3 ಸ್ಕೋರ್ ದಾಖಲಿಸಿ, ಸಾಮ್ರಾಟ್– ಸುರುಚಿ ಜೋಡಿಯನ್ನು (479.6) ಹಿಂದೆಹಾಕಿದರು. ಭಾರತದ ಜೋಡಿ, ಕ್ವಾಲಿಫಿಕೇಷನ್ ಸುತ್ತಿನ ನಂತರ ಮೊದಲ ಸ್ಥಾನದಲ್ಲಿತ್ತು.
ಜೂನಿಯರ್ ಮಹಿಳೆಯರ ತಂಡ ವಿಭಾಗದಲ್ಲಿ ಭಾರತದ ರಶ್ಮಿಕಾ, ವಂಶಿಕಾ ಮತ್ತು ಅಗಮ್ ಗ್ರೆವಾಲ್ ಅವರಿದ್ದ ತಂಡ (1717 ಪಾಯಿಂಟ್ಸ್) ಏರ್ ಪಿಸ್ತೂಲ್ ವಿಭಾಗದ ಚಿನ್ನ ಗೆದ್ದಿತು. ಯೂತ್ ವಿಭಾಗದಲ್ಲಿ ಪ್ರಿಯಾಂಶಿ, ಚಹೆಕ್ ಮತ್ತು ಶಿಕ್ಷಾ ಸರನ್ ಅವರಿದ್ದ ತಂಡವು ಟೀಮ್ (1709 ಪಾಯಿಂಟ್ಸ್) ವಿಭಾಗದ ಚಿನ್ನ ಬಾಚಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.