
ಪಂಕಜ್ ಅಡ್ವಾಣಿ
ದೋಹಾ (ಕತಾರ್): ಹಾಲಿ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಮಂಗಳವಾರ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ 4–0 ಅಂತರದಿಂದ ಇರಾನ್‌ನ ಶಾಹಿನ್ ಸಬ್ಜಿ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟರು.
ಮತ್ತೊಂದು ಸೆಮಿಫೈನಲ್‌ನಲ್ಲಿ ಇರಾನ್‌ನ ಅಮೀರ್ ಸರ್ಕೋಶ್ ಮತ್ತು ಚೀನಾದ ಡೆಂಗ್ ಹೌಹುಯಿ ಮುಖಾಮುಖಿಯಾಗಿದ್ದು, ಆ ಪಂದ್ಯದ ವಿಜೇತರನ್ನು ಪಂಕಜ್ ಅವರು ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಮೂರು ಬಾರಿಯ ಚಾಂಪಿಯನ್ ಅಡ್ವಾಣಿ ತಮ್ಮ ಪಂದ್ಯದಲ್ಲಿ ಶಾಹಿನ್ ವಿರುದ್ಧ ನೇರ ಫ್ರೇಮ್‌ಗಳಲ್ಲಿ ಗೆಲುವು ದಾಖಲಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು 4–0ಯಿಂದ ಯುಎಇಯ ಮೊಹಮ್ಮದ್ ಶೆಹಾಬ್ ವಿರುದ್ಧ ಗೆಲುವು ಸಾಧಿಸಿದ್ದರು.
ಮಹಿಳೆಯರ ವಿಭಾಗದ (10 ರೆಡ್) ಸ್ಪರ್ಧೆಯಲ್ಲಿ ಭಾರತದ ಕೀರ್ತನಾ ಪಾಂಡಿಯನ್ 2-1 ಅಂತರದಿಂದ ಹಾಂಗ್‌ಕಾಂಗ್‌ನ ವಾನ್ ಕಾ ಕೈ ಅವರನ್ನು ಸೋಲಿಸಿ ‘ಡಿ’ ಗುಂಪಿನಲ್ಲಿ ಸತತ ಎರಡನೇ ಗೆಲುವು ಸಾಧಿಸಿದರು. ಆರಂಭಿಕ ಫ್ರೇಮ್‌ನ ಹಿನ್ನಡೆಯಿಂದ ಚೇತರಿಸಿಕೊಂಡ ಕೋಲಾರದ ಕೀರ್ತನಾ ನಂತರದಲ್ಲಿ ಸತತ ಎರಡೂ ಫ್ರೇಮ್‌ಗಳಲ್ಲಿ ಪ್ರಾಬಲ್ಯ ಮೆರೆದರು.
ಆರಂಭಿಕ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ತಮಿಳುನಾಡಿನ ಅನುಪಮಾ ರಾಮಚಂದ್ರನ್ ಅವರು ಬಿ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ 2–1ರಿಂದ ಸೇತಯೇಶ್ ಅಮಿರಾಜಿಮಿ ವಿರುದ್ಧ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.