ADVERTISEMENT

ಅಥ್ಲೆಟಿಕ್ಸ್‌ ಕೋಚ್‌ ರಮೇಶ್‌ ಅಮಾನತು

ಪಿಟಿಐ
Published 20 ಏಪ್ರಿಲ್ 2025, 14:30 IST
Last Updated 20 ಏಪ್ರಿಲ್ 2025, 14:30 IST
<div class="paragraphs"><p>ಅಮಾನತು</p></div>

ಅಮಾನತು

   

ನವದೆಹಲಿ: ಉದ್ದೀಪನ ಮದ್ದು ಪಿಡುಗು ಮತ್ತೊಮ್ಮೆ ದೇಶದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಈ ಹಗರಣದಲ್ಲಿ ‘ಕೈಜೋಡಿಸಿದ’ ಭಾರತ ಜೂನಿಯರ್ ತಂಡದ ಮುಖ್ಯ ಕೋಚ್‌ ರಮೇಶ್ ನಾಗ್ಪುರಿ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಏಜನ್ಸಿಯು (ನಾಡಾ)  ಅಮಾನತುಗೊಳಿಸಿದೆ.

ಉದ್ದೀಪನ ಮದ್ದು ಪರೀಕ್ಷೆ ತಪ್ಪಿಸಿಕೊಂಡಿರುವ ಏಳು ಮಂದಿ ಅಥ್ಲೀಟುಗಳನ್ನೂ ಅಮಾನತುಗೊಳಿಸಲಾಗಿದೆ.

ADVERTISEMENT

ರಮೇಶ್ ಜೊತೆ ಇನ್ನಿಬ್ಬರು ಕೋಚ್‌ಗಳೂ ಅಮಾನತಿಗೆ ಒಳಗಾಗಿದ್ದಾರೆ. ಕರಮವೀರ್‌ ಸಿಂಗ್ ಮತ್ತು ರಾಕೇಶ್ ಈ ಇಬ್ಬರು ಕೋಚ್‌ಗಳು.

‍ಪಾರಸ್‌ ಸಿಂಘಾಲ್‌, ಪೂಜಾ ರಾಣಿ, ನಲುಬೋತು ಷಣ್ಮುಗ ಶ್ರೀನಿವಾಸ್‌, ಚೆಲಿಮಿ ಪ್ರತುಷಾ, ಶುಭಂ ಮಹಾರ, ಕಿರಣ್ ಮತ್ತು ಜ್ಯೋತಿ ಅವರು ‘ನಾಡಾ’ದಿಂದ ಅಮಾನತುಗೊಂಡ ಅಥ್ಲೀಟುಗಳ ಪಟ್ಟಿಯಲ್ಲಿದ್ದಾರೆ.

ನಾಗ್ಪುರಿ ಅವರು ಹೈದರಾಬಾದಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2023ರಲ್ಲಿ ಅವರನ್ನು ಜೂನಿಯರ್‌ ತಂಡದ ಮುಖ್ಯ ಕೋಚ್‌ ಆಗಿ ಭಾರತ ಅಥ್ಲೆಟಿಕ್‌ ಫೆಡರೇಷನ್ ನೇಮಕ ಮಾಡಿದ್ದು, ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾದ ಕೋಚ್‌.

19 ವರ್ಷದ ಸಿಂಘಾಲ್ ಅವರು ಹರಿಯಾಣದಲ್ಲಿ 2024ರ ನಡೆದ ಖೇಲೊ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಬಾಲಕರ 2000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಜಯಶಾಲಿ ಆಗಿದ್ದರು. ಶ್ರೀನಿವಾಸ್‌ ಅವರು ಫೆಡರೇಷನ್ ಕಪ್ ಮತ್ತು 2024ರ ರಾಷ್ಟ್ರೀಯ ಅಂತರ–ರಾಜ್ಯ ಚಾಂಪಿಯನ್‌ಷಿಪ್‌ನ 200 ಮೀ. ಓಟದಲ್ಲಿ ಬೆಳ್ಳಿ ಗೆದ್ದಿದ್ದರು.

‘ಹೈದರಾಬಾದಿನ ಕ್ರೀಡಾ ಪ್ರಾಧಿಕಾರದ ಕೇಂದ್ರಕ್ಕೆ ನಾಡಾ ಕಳುಹಿಸಿದ್ದ ಮಾದರಿ ಸಂಗ್ರಹಣೆ ಅಧಿಕಾರಿಗಳ ತಪಾಸಣೆಯಿಂದ ಇಬ್ಬರು ಅಥ್ಲೀಟುಗಳು ತಪ್ಪಿಸಿಕೊಳ್ಳಲು ನೆರವು ನೀಡಿದ್ದರು ಎನ್ನಲಾದ ಆರೋಪ ನಾಗ್ಪುರಿ ಮೇಲಿದೆ’ ಎಂದು ಮೂಲಗಳು ತಿಳಿಸಿವೆ.

ಸ್ಪ್ರಿಂಟರ್ ದ್ಯುತಿ ಚಾಂದ್‌ ಮತ್ತು ಪ್ಯಾರಾಲಿಂಪಿಯನ್ ದೀಪ್ತಿ ಜೀವಾಂಜಿ ಅವರಿಗೆ ನಾಗ್ಪುರಿ ತರಬೇತಿ ನೀಡಿದ್ದಾರೆ.

ತಮ್ಮ ಮೇಲಿನ ಕ್ರಮಕ್ಕೆ ಪ್ರತಿಕ್ರಿಯಿಸಲು ನಾಗ್ಪುರಿ ನಿರಾಕರಿಸಿದರು. ‘ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಭಾರತದ ಅಥ್ಲೆಟಿಕ್ಸ್‌ಗೆ ನನ್ನಿಂದ ಆದಷ್ಟು ಉತ್ತಮ ಸೇವೆ ಸಲ್ಲಿಸುತ್ತಿದ್ದೇನೆ’ ಎಂದಷ್ಟೇ ಹೇಳಿದರು. ಎಎಫ್‌ಐ ಅಧಿಕಾರಿಗಳೂ ಹೆಚ್ಚೇನೂ ಪ್ರತಿಕ್ರಿಯಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.