ನವದೆಹಲಿ: ಭಾರತದ ಬಾಲರಾಜ್ ಪನ್ವರ್ ಅವರು ಪ್ಯಾರಿಸ್ ಒಲಿಂಪಿಕ್ ಕೂಟದ ರೋಯಿಂಗ್ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದರು.
ದಕ್ಷಿಣ ಕೊರಿಯಾದ ಚುಂಗ್ಜುನಲ್ಲಿ ಭಾನುವಾರ ನಡೆದ ವಿಶ್ವ ಏಷ್ಯನ್ ಮತ್ತು ಒಷಿನಿಯಾ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಅರ್ಹತಾ ರೆಗೆಟ್ಟಾದ ಪುರುಷರ ಸಿಂಗಲ್ ಸ್ಕಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಬಾಲರಾಜ್ ಅರ್ಹತೆ ಗಿಟ್ಟಿಸಿದರು. ಹಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಸ್ವಲ್ಪದರಲ್ಲೇ ಕಂಚಿನ ಪದಕ ತಪ್ಪಿಸಿಕೊಂಡಿದ್ದ 25 ವರ್ಷದ ಭಾರತೀಯ ಸೇನಾ ರೋವರ್, 2000 ಮೀಟರ್ ರೇಸ್‌ನಲ್ಲಿ 7ನಿಮಿಷ, 01.27 ಸೆಕೆಂಡುಗಳಲ್ಲಿ ಮೂರನೇ ಸ್ಥಾನ ಪಡೆದು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು.
ಮೊದಲ 500 ಮೀಟರ್ಸ್ ಲೆಗ್‌ನಲ್ಲಿ ಪನ್ವರ್, ಚಿನ್ನದ ಪದಕವಿಜೇತ ಕಜಕಿಸ್ತಾನದ ವ್ಲಾಡಿಸ್ಲಾವ್ ಯಾಕೋವ್ಲೆವ್ ಮತ್ತು ಹಾಂಗ್ ಕಾಂಗ್‌ನ ಹಿನ್ ಚುನ್ ಚಿಯು ಅವರ ಹಿಂದೆ ಮೂರನೇ ಸ್ಥಾನದಲ್ಲಿದ್ದರು. ಆದರೆ ಪನ್ವರ್ ಮುನ್ನಡೆ ಸಾಧಿಸಿದರು.
ಅಂತಿಮ ಹಂತದಲ್ಲಿ ಯಾಕೊವ್ಲೆವ್ ಮುನ್ನಡೆ ಸಾಧಿಸಿ, 6:59.46 ಸೆಕೆಂಡುಗಳ ಸಮಯದೊಂದಿಗೆ ಅಗ್ರಸ್ಥಾನ ಪಡೆದರು. ಇಂಡೊನೇಷ್ಯಾದ ಮೆಮೊ ಮೆಮೋ ಎರಡನೇ ಸ್ಥಾನ ಪಡೆದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್‌ನಲ್ಲಿ ಭಾರತದ ಅರ್ಜುನ್ ಲಾಲ್ ಮತ್ತು ಅರವಿಂದ್ ಸಿಂಗ್ 11 ನೇ ಸ್ಥಾನ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.