ADVERTISEMENT

ಬೆಂಗಳೂರು ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ: ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 22:57 IST
Last Updated 23 ಜನವರಿ 2024, 22:57 IST
ನೈಜೆಲ್‌ ಶಾರ್ಟ್‌
ಚಿತ್ರ: ಬಿ.ಎಚ್‌.ಶಿವಕುಮಾರ್
ನೈಜೆಲ್‌ ಶಾರ್ಟ್‌ ಚಿತ್ರ: ಬಿ.ಎಚ್‌.ಶಿವಕುಮಾರ್   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್‌ ಓಪನ್ ಚೆಸ್‌ ಟೂರ್ನಿಯ ಮುಕ್ತಾಯಕ್ಕೆ ಇನ್ನು ಮೂರೇ ಸುತ್ತುಗಳು ಉಳಿದಿರುವಂತೆ ಪ್ರಶಸ್ತಿಗೆ ಪೈಪೋಟಿ ತೀವ್ರಗೊಂಡಿದೆ. ನಾಲ್ವರು ಗ್ರ್ಯಾಂಡ್‌ಮಾಸ್ಟರ್‌ ಆಟಗಾರರು– ಅಭಿಜಿತ್ ಗು‍ಪ್ತಾ, ಎಸ್‌.ಪಿ. ಸೇತುರಾಮ್, ನೈಜೆಲ್‌ ಶಾರ್ಟ್‌ ಮತ್ತು ಮಿತ್ರಬಾ ಗುಹಾ– ಏಳು ಸುತ್ತುಗಳ ನಂತರ ತಲಾ ಆರು ಪಾಯಿಂಟ್ಸ್‌ ಕಲೆಹಾಕಿದ್ದು ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ ಬೋರ್ಡ್‌ನಲ್ಲಿ ಅಗ್ರ ಶ್ರೇಯಾಂಕದ ಅಭಿಜಿತ್‌ ಗುಪ್ತಾ (ಪಿಎಸ್‌ಸಿಬಿ) ಮತ್ತು ಬಂಗಾಳದ ಮಿತ್ರಬಾ ಗುಹಾ ಬೇಗನೇ– ಕೇವಲ 16 ನಡೆಗಳ ನಂತರ ‘ಡ್ರಾ’ಕ್ಕೆ ಒಪ್ಪಿಕೊಂಡರು. ಎರಡನೇ ಶ್ರೇಯಾಂಕ ಪಡೆದಿರುವ ರಾಷ್ಟ್ರೀಯ ಚಾಂಪಿಯನ್ ಸೇತುರಾಮನ್ ವಿರುದ್ಧ ಬಿಳಿ ಕಾಯಿಗಳಲ್ಲಿ ಆಡಿದ ಒಂಬತ್ತನೇ ಶ್ರೇಯಾಂಕದ ಪಿ.ಇನಿಯನ್ 43ನೇ ನಡೆಯಲ್ಲಿ ಸೋಲೊಪ್ಪಿಕೊಂಡರು.

ಬ್ರಿಟನ್‌ನ ಹಳೆಯ ಹುಲಿ ನೈಜೆಲ್ ಶಾರ್ಟ್ ಅವರಿಗೆ ತಮಿಳುನಾಡಿನ ಎ.ಆರ್‌.ಇಳಂಪರ್ತಿ ಹೆಚ್ಚು ಪೈಪೋಟಿ ಒಡ್ಡಲಿಲ್ಲ. 34ನೇ ನಡೆಯಲ್ಲಿ ಶಾರ್ಟ್‌ ಗೆದ್ದರು.

ADVERTISEMENT

ಆರು ಆಟಗಾರರು ಐದೂವರೆ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಟೂರ್ನಿಯಲ್ಲಿ ಉತ್ತಮ ಆಟ ತೋರುತ್ತಿರುವ ಕೇರಳದ ಯುವ ಆಟಗಾರ ನಿತಿನ್ ಬಾಬು (ರೇಟಿಂಗ್‌: 2177), ಐಎಂ ಸಮ್ಮೇದ್ ಜಯಕುಮಾರ್ ಅವರನ್ನು ಸೋಲಿಸಿದರು. ಎರಡನೇ ಸ್ಥಾನದಲ್ಲಿರುವ ಇತರ ಐವರು– ಜಿಎಂ ಎಂ.ಶ್ಯಾಮಸುಂದರ್, ಜಿಎಂ ಸಂದೀಪನ್ ಚಂದಾ, ಎಲ್‌.ಆರ್‌.ಶ್ರೀಹರಿ, ನೀಲೋತ್ಪಲ್ ದಾಸ್‌ ಮತ್ತು ನೀಲೇಶ್ ಸಹಾ.

ಎಂಟನೇ ಸುತ್ತಿನಲ್ಲಿ ಸೇತುರಾಮನ್‌, ಅಭಿಜಿತ್‌ ಗುಪ್ತಾ ವಿರುದ್ಧ, ಮಿತ್ರಬಾ ಗುಹಾ, ನೈಜೆಲ್ ಶಾರ್ಟ್‌ ವಿರುದ್ಧ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.