
ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ತಂಡವು ಅಖಿಲ ಭಾರತ ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಕನಕಪುರ ರಸ್ತೆಯಲ್ಲಿರುವ ಜೈನ್ ವಿ.ವಿ ಗ್ಲೋಬಲ್ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಜೈನ್ ವಿಶ್ವವಿದ್ಯಾಲಯ ತಂಡವು 74–51ರಿಂದ ಪಂಜಾಬ್ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು.
ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಜೈನ್ ವಿಶ್ವವಿದ್ಯಾಲಯದ ಆಟಗಾರ್ತಿಯರು ಮೊದಲಾರ್ಧದಲ್ಲಿ 40–28ರ ಮುನ್ನಡೆ ಗಳಿಸಿದರು. ದ್ವಿತೀಯಾರ್ಧದಲ್ಲಿಯೂ ಪಾರಮ್ಯ ಸಾಧಿಸಿ, 23 ಅಂಕಗಳಿಂದ ನಿರಾಯಾಸವಾಗಿ ಗೆದ್ದರು. ಸಿಯಾ ದಿಯೊಧಾರ್(17 ಅಂಕ) ಹಾಗೂ ನವೊಮಿ (16 ಅಂಕ) ಗೆಲುವಿನಲ್ಲಿ ಮಿಂಚಿದರು. ಪಂಜಾಬ್ ತಂಡದ ಪೂಜಾ (19 ಅಂಕ) ಅವರ ಆಟ ಪ್ರೇಕ್ಷಕರ ಮನ ಗೆದ್ದಿತು.
ತೃತೀಯ ಸ್ಥಾನದ ನಿರ್ಧಾರಕ್ಕಾಗಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಎಂ ವಿಶ್ವವಿದ್ಯಾಲಯ ತಂಡವು 82–58ರಿಂದ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ವಿಶ್ವವಿದ್ಯಾಲಯದ ವಿರುದ್ಧ ಜಯಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.