ADVERTISEMENT

PV Web Exclusive: ಬಾಸ್ಕೆಟ್‌ಬಾಲ್‌ ಆಟಗಾರನ ಫ್ಯಾಷನ್‌ ವರಸೆ!

ಸತೀಶ ಬೆಳ್ಳಕ್ಕಿ
Published 23 ಸೆಪ್ಟೆಂಬರ್ 2020, 6:50 IST
Last Updated 23 ಸೆಪ್ಟೆಂಬರ್ 2020, 6:50 IST
ವರುಣ್‌ ಶ್ರೀನಿವಾಸ್‌
ವರುಣ್‌ ಶ್ರೀನಿವಾಸ್‌   
""
""

ಬಾಸ್ಕೆಟ್‌ಬಾಲ್‌ ಆಟಗಾರ ವರುಣ್‌ ಶ್ರೀನಿವಾಸ್‌ ಈಗ ಫ್ಯಾಷನ್‌ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬರೋಬ್ಬರಿ 6.5 ಅಡಿ ಎತ್ತರ ಮತ್ತುಭರಪೂರ ಆತ್ಮವಿಶ್ವಾಸ ಹೊಂದಿರುವ ವರುಣ್‌ಗೆ ಫ್ಯಾಷನ್‌ ಕ್ಷೇತ್ರದಲ್ಲಿ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಳ್ಳಲಿದೆ ಎಂಬುದು ಅವರ ಅಭಿಮಾನಿಗಳ ನಂಬಿಕೆ. ಫ್ಯಾಷನ್‌ಪ್ರಿಯರು ಈವರೆಗೆ ರ‍್ಯಾಂಪ್‌ ತುದಿಯಲ್ಲಿ ಎದೆಯಬ್ಬಿಸಿ ನಿಂತು, ಆತ್ಮವಿಶ್ವಾಸದ ನಗು ತುಳುಕಿಸುತ್ತಿದ್ದ ನೀಳಕಾಲುಗಳ ಚೆಲುವೆಯರ ಸೊಬಗನ್ನಷ್ಟೇ ಸವಿದಿದ್ದರು. ಇನ್ನುಮುಂದೆ, ಕ್ರೀಡೆ ಮತ್ತು ಫ್ಯಾಷನ್‌ ಈ ಎರಡು ಕ್ಷೇತ್ರಗಳ ಐಕಾನ್‌ನಂತೆ ಗೋಚರಿಸುವ ವರುಣ್‌ ಅವರಂತಹ ಕಟ್ಟುಮಸ್ತು ಹೈದರ ಫ್ಯಾಷನ್‌ ಝಲಕ್‌ ಅನ್ನೂ ಕಣ್ತುಂಬಿಕೊಳ್ಳಬಹುದು!

ಕ್ರೀಡಾ ಕ್ಷೇತ್ರವನ್ನೇ ಚಿಮ್ಮು ಹಲಗೆಯಾಗಿಸಿಕೊಂಡು ಫ್ಯಾಷನ್‌ ಕ್ಷೇತ್ರಕ್ಕೆ ಜಿಗಿದಿದ್ದಾರೆ ಬಾಸ್ಕೆಟ್‌ಬಾಲ್‌ ಆಟಗಾರ ವರುಣ್‌ ಶ್ರೀನಿವಾಸ್‌. ಕಣ್ಣ ತುಂಬ ಕ್ರೀಡೆಯ ಕನಸು ತುಂಬಿಕೊಂಡಿರುವ ಬಡ ಮಕ್ಕಳ ಬಗ್ಗೆ ಸದಾ ಮಿಡಿಯುವ ವರುಣ್‌ ಈಗ ಪ್ರತಿಷ್ಠಿತ ಕ್ರೀಡಾ ತರಬೇತಿ ಶಾಲೆಯಾದ ‘ಪಡುಕೋಣೆ ದ್ರಾವಿಡ್‌ ಅಕಾಡೆಮಿ’ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೀಗಲ್ಸ್‌ ಬಾಸ್ಕೆಟ್‌ಬಾಲ್‌ ಕ್ಲಬ್‌ನಲ್ಲೂ ಆಡುತ್ತಿದ್ದಾರೆ. ಕ್ರೀಡೆಯಿಂದ ಫ್ಯಾಷನ್‌ ಕ್ಷೇತ್ರದತ್ತ ಹೊರಳಿದ ಹಾದಿಯ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ.

* ನಮಸ್ತೆ ವರುಣ್‌, ನಿಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಹೇಳಿ...

ADVERTISEMENT

ನಮಸ್ಕಾರ ಸರ್‌. ನಾನು ಹುಟ್ಟಿ– ಬೆಳೆದಿದ್ದು ಬೆಂಗಳೂರಿನಲ್ಲೇ. ಪದವಿ ವ್ಯಾಸಂಗಕ್ಕಾಗಿ ಮೂರು ವರ್ಷ ಲಂಡನ್‌ಗೆ ಹೋಗಿದ್ದೆ. ಮುಂಬೈನ ಎನ್‌ಜಿಒ ಒಂದರಲ್ಲಿ ಕೆಲಸ ಕೂಡ ಮಾಡಿದ್ದೇನೆ. ಅಲ್ಲಿದ್ದಾಗ ಬಡ ಮಕ್ಕಳಿಗೆ ಬಾಸ್ಕೆಟ್‌ಬಾಲ್‌ ತರಬೇತಿ ನೀಡಿದ್ದು, ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳು ಅನಿಸುತ್ತದೆ. ಬಾಸ್ಕೆಟ್‌ಬಾಲ್‌ನಲ್ಲಿ ನಾನು ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೇನೆ. ನಾನೊಬ್ಬ ಕ್ರೀಡಾಮೋಹಿ; ಬಾಸ್ಕೆಟ್‌ಬಾಲ್‌ ಅಂದರೆ ಪಂಚಪ್ರಾಣ.

* ಕ್ರೀಡಾಪಟುವಾದ ನಿಮ್ಮನ್ನು ಫ್ಯಾಷನ್‌ ಕ್ಷೇತ್ರದತ್ತ ಸೆಳೆದ ಅಂಶ ಯಾವುದು?‌

ಮಾಡೆಲಿಂಗ್‌ ಬಗೆಗಿನ ಕುತೂಹಲ ನನ್ನೊಳಗೆ ಮೊದಲಿನಿಂದಲೂ ಇತ್ತು. ಕೆಲವು ವರ್ಷಗಳ ಹಿಂದೆ ಒಂದು ಆಡಿಷನ್‌ನಲ್ಲಿ ಕೂಡ ಪಾಲ್ಗೊಂಡಿದ್ದೆ. 6.5 ಅಡಿ ನನ್ನ ಎತ್ತರ. ಕ್ರೀಡಾಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರೂ ನನ್ನ ಕುಟುಂಬದವರು, ಸ್ನೇಹಿತರು ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಳ್ಳುವಂತೆ ಪ್ರೀತಿಪೂರ್ವಕವಾಗಿ ಒತ್ತಾಯಿಸುತ್ತಿದ್ದರು. ಅವರೆಲ್ಲರ ಪ್ರೋತ್ಸಾಹದಿಂದ ಫ್ಯಾಷನ್‌ ಕ್ಷೇತ್ರಕ್ಕೆ ಬರಲು ನಿರ್ಧರಿಸಿದೆ. ಈಚೆಗಷ್ಟೇ ಮೆನ್ಸ್‌ ವೇರ್‌ ಬ್ರಾಂಡ್‌ಗೆ ರೂಪದರ್ಶಿಯಾಗಿ ಆಯ್ಕೆಯಾಗಿದ್ದು, ಅದರ ಫೋಟೊಶೂಟ್‌ ಕೂಡ ಮುಗಿಸಿದ್ದೇನೆ.

* ಕ್ರೀಡಾಕ್ಷೇತ್ರದಲ್ಲಿ ಸಿಕ್ಕ ಜನಪ್ರಿಯತೆ ಫ್ಯಾಷನ್‌ ಕ್ಷೇತ್ರದಲ್ಲಿ ಸೂಪರ್‌ ಮಾಡೆಲ್‌ ಆಗಿ ಮಿಂಚಲು ಅನುಕೂಲಕಾರಿಯೇ, ಈ ಬಗ್ಗೆ ನಿಮ್ಮ ಅಭಿಪ್ರಾಯ?

ನಾಟ್‌ ರಿಯಲಿ. ಏಕೆಂದರೆ ಬಾಸ್ಕೆಟ್‌ಬಾಲ್‌ ನೋಡಲು ಬರುವ ಪ್ರೇಕ್ಷಕರು ಮತ್ತು ಅಭಿಮಾನಿಗಳ ಮೈಂಡ್‌ಸೆಟ್‌ ಬೇರೆ ತೆರೆನಾದದ್ದು. ಗ್ಲ್ಯಾಮರ್‌ ಜಗತ್ತಿನ ಜನರ ಮನಸ್ಥಿತಿಯೇ ಬೇರೆ. ಎರಡೂ ಭಿನ್ನ ಕ್ಷೇತ್ರಗಳು. ಈ ಎರಡು ಕ್ಷೇತ್ರಗಳ ಆಡಿಯನ್ಸ್‌ ನಡುವೆ ಭೂಮಿ– ಆಕಾಶದಷ್ಟೇ ವ್ಯತ್ಯಾಸ ಇದೆ. ಹಾಗಾಗಿ, ಬಾಸ್ಕೆಟ್‌ಬಾಲ್‌ ಕ್ರೀಡೆಯಲ್ಲಿ ಸಿಕ್ಕ ಜನಪ್ರಿಯತೆ ಫ್ಯಾಷನ್‌ ಉದ್ಯಮದಲ್ಲಿ ನೆರವಾಗುತ್ತದೆ ಅಂತ ನನಗೆ ಅನ್ನಿಸುವುದಿಲ್ಲ. ಒಬ್ಬ ಕ್ರೀಡಾಪಟುವಾಗಿ ನಾನು ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಜನರಿಗೆ ಪರಿಚಯ ಇದ್ದೇನೆ. ಅಂತೆಯೇ, ಮಾಡೆಲಿಂಗ್‌ ಕ್ಷೇತ್ರದಲ್ಲೂ ಬೆಳೆಯುತ್ತೇನೆ ಎಂಬ ನಂಬಿಕೆ ಇದೆ.

* ಫ್ಯಾಷನ್‌ ಕ್ಷೇತ್ರಕ್ಕೆ ಬರುವ ಮುಂಚಿನ ತಯಾರಿ ಬಗ್ಗೆ ಹೇಳಿ?

ದೈಹಿಕ ಮತ್ತು ಮಾನಸಿಕವಾಗಿ ಫಿಟ್‌ ಆಗಿ ಇರಲು ಬಹಳ ವರ್ಷಗಳಿಂದಲೂ ನಾನು ಕಟ್ಟುನಿಟ್ಟಾದ ವೇಳಾಪಟ್ಟಿ ಅನುಸರಿಸುತ್ತ ಬಂದಿದ್ದೇನೆ. ಮಾಡೆಲಿಂಗ್‌ ಕ್ಷೇತ್ರಕ್ಕೆ ಬರಲು ನನ್ನ ಹೈಟ್‌ ವರದಾನ ಆಯಿತು. ರೂಪದರ್ಶಿಗಳು, ಸಿನಿಮಾ ನಟರಂತೆ ಸ್ಕಿನ್‌ಕೇರ್‌ ರೂಟೀನ್‌ ಅನುಸರಿಸುತ್ತಿದ್ದೇನೆ. ವರ್ಕೌಟ್‌ ಕೂಡ ಮಾಡುತ್ತಿದ್ದೇನೆ. ಹೈಟ್‌ಗೆ ಅನುಗುಣವಾಗಿ ವೇಯ್ಟ್‌ ಕಾಯ್ದುಕೊಳ್ಳುವುದು ಕೂಡ ಮುಖ್ಯ. ಇಲ್ಲವಾದರೆ ಫೋಟೊಗಳಲ್ಲಿ ನೋಡಲು ಕೆಟ್ಟದಾಗಿ ಕಾಣಿಸುತ್ತೇವೆ. ಮಾಡೆಲಿಂಗ್‌ ಕ್ಷೇತ್ರಕ್ಕೆ ಬರುವ ಬಗ್ಗೆ ಅಪಾರ ಆಸಕ್ತಿ ಇದ್ದುದರಿಂದ ಸೆಲ್ಫ್‌ ಟ್ಯೂಟರ್‌ ಮಾಡಿಕೊಂಡೆ. ಯೂಟ್ಯೂಬ್‌ನಲ್ಲಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ನನ್ನನ್ನು ನಾನೇ ಫೈನ್‌ ಟ್ಯೂನ್‌ ಮಾಡಿಕೊಂಡೆ.

* ಕ್ರೀಡೆ ಮತ್ತು ಮಾಡೆಲಿಂಗ್‌ ಇವೆರಡರಲ್ಲಿ ಯಾವುದು ತುಂಬ ಇಷ್ಟ?

ಬಾಸ್ಕೆಟ್‌ಬಾಲ್‌ ಯಾವತ್ತಿದ್ದರೂ ನನ್ನ ಫಸ್ಟ್‌ ಲವ್‌. ಯಾಕಂದರೆ, ಕ್ರೀಡೆ ಅಥವಾ ಕ್ರೀಡಾಪಟು ಅಂದರೆ ಆಟದ ತಂತ್ರಗಾರಿಕೆ, ಆಟಗಾರನ ದೈಹಿಕ ಮತ್ತು ಮಾನಸಿಕ ದೃಢತೆ ಇವೆರಡರ ಬ್ಯೂಟಿಫುಲ್‌ ಕಾಂಬಿನೇಷನ್‌. ಹಾಗಾಗಿ, ನನಗೆ ಕ್ರೀಡಾಕ್ಷೇತ್ರವೇ ಅಚ್ಚುಮೆಚ್ಚು.

ಮಾಡೆಲಿಂಗ್‌ ನಂತರದ ಇಷ್ಟ. ಕೋರ್ಟ್‌ನಲ್ಲಿ ಬಾಸ್ಕೆಟ್‌ಬಾಲ್‌ ಹಿಡಿದು ಆಡುವಾಗ ಎಷ್ಟು ಖುಷಿ ಸಿಗುತ್ತದೆಯೋ ಈಗ ಕ್ಯಾಮೆರಾ ಎದುರು ಫೋಸ್‌ ಮಾಡುವಾಗಲೂ ಅಷ್ಟೇ ತೃಪ್ತಿ ಸಿಗುತ್ತಿದೆ. ಮುಂದೊಂದು ದಿನ ಕ್ರೀಡೆ ಮತ್ತು ಫ್ಯಾಷನ್‌ ಎರಡನ್ನೂ ಸಮಪ್ರಮಾಣದಲ್ಲಿ ಪ್ರೀತಿಸುತ್ತೇನೆ.

* ಮಾಡೆಲಿಂಗ್ ಕ್ಷೇತ್ರದಲ್ಲಿ ಕಹಿ ಅನುಭವಗಳು ಆಗಿದ್ದು ಇದೆಯೇ?‌‌

ಈವರೆಗೆ ಅಂತಹ ಅನುಭವಗಳು ಆಗಿಲ್ಲ. ಮುಂದೆ ಕೂಡ ಅಂತಹ ಘಟನೆಗಳು ನನ್ನ ವೃತ್ತಿ ಜೀವನದಲ್ಲಿ ನಡೆಯದಿರಲಿ ಎಂದು ಪ್ರಾರ್ಥಿಸುತ್ತೇನೆ.

* ನಿಮ್ಮ ಮುಂದಿನ ಗುರಿ ಬಗ್ಗೆ ಹೇಳಿ?

ಗ್ಲ್ಯಾಮರ್‌ ಇಂಡಸ್ಟ್ರಿಯಲ್ಲಿ ಅತ್ಯುತ್ತಮವಾದ ಹೆಸರು ಮಾಡಬೇಕು. ನಿಧಾನವಾಗಿಯಾದರೂ ಸದೃಢವಾದ ಹೆಜ್ಜೆಗಳನ್ನು ಇಡಬೇಕು ಎಂಬುದು ನನ್ನ ಆಶಯ. ಅದೇರೀತಿ, ಎಂಬಿಎ ಪದವಿ ಪಡೆದು ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಉದ್ಯಮ ಅಥವಾ ನನ್ನದೇ ಒಂದು ಕ್ರೀಡಾ ಅಕಾಡೆಮಿ ಸ್ಥಾಪಿಸುವ ಕನಸಿದೆ. ಭಾರತದಲ್ಲಿ ಕ್ರಿಕೆಟ್‌ ಎಷ್ಟು ಜನಪ್ರಿಯತೆ ಪಡೆದಿದೆಯೋ, ಅದೇರೀತಿ ಬಾಸ್ಕೆಟ್‌ಬಾಲ್‌ ಕೂಡ ಜನರ ಮನಸ್ಸು ಗೆಲ್ಲಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ನನ್ನಂತಹ ಅನೇಕ ಕ್ರೀಡಾಪಟುಗಳು ಈಗಿನಿಂದಲೇ ಸಿದ್ಧರಾಗಬೇಕು.

ಸಾಕಷ್ಟು ಮಕ್ಕಳಿಗೆ ಬಾಸ್ಕೆಟ್‌ಬಾಲ್‌ ಕಲಿಯುವ ಮನಸ್ಸು ಇರುತ್ತದೆ. ಆದರೆ, ಅವರ ಬಳಿ ಹಣ ಇರುವುದಿಲ್ಲ. ಇಂತಹ ಮಕ್ಕಳ ಕನಸನ್ನು ನನಸಾಗಿಸುವ ಸಲುವಾಗಿ ಒಂದು ಅಕಾಡೆಮಿ ತೆರೆಯಬೇಕು ಅಂದುಕೊಂಡಿದ್ದೇನೆ. ಅಂಡರ್‌ಪ್ರಿವಿಲೈಸ್ಡ್‌ ಮಕ್ಕಳ ಕನಸಿಗೆ ನೀರೆರೆಯುವುದು ಕೂಡ ನನ್ನ ಗುರಿ. ಮುಂದಿನ ಐದತ್ತು ವರ್ಷಗಳಲ್ಲಿ ಪಾಶ್ಚಾತ್ಯ ದೇಶಗಳಂತೆ ನಮ್ಮ ದೇಶದಲ್ಲೂ ಬಾಸ್ಕೆಟ್‌ಬಾಲ್‌ ಕ್ರೀಡೆ ಜನಪ್ರಿಯತೆ ಗಳಿಸಬೇಕು ಎಂಬುದು ನನ್ನ ಪುಟ್ಟ ಆಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.