ADVERTISEMENT

ಚಳಿಗಾಲದ ಕೂಟ: ಸ್ವರ್ಣ ಜಯಿಸಿದ ಕರ್ನಾಟಕದ ಭವಾನಿ

ಪಿಟಿಐ
Published 25 ಫೆಬ್ರುವರಿ 2026, 22:25 IST
Last Updated 25 ಫೆಬ್ರುವರಿ 2026, 22:25 IST
ಭವಾನಿ ತೆಕ್ಕಡ
ಭವಾನಿ ತೆಕ್ಕಡ   

ಶ್ರೀನಗರ: ಕರ್ನಾಟಕದ ಅನುಭವಿ ಸ್ಕೀಯಿಂಗ್‌ ಪಟು ಭವಾನಿ ತೆಕ್ಕಡ ನಂಜುಂಡ ಅವರು, ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದ ನಾರ್ಡಿಕ್‌ ಮಹಿಳಾ ಸ್ಪ್ರಿಂಟ್‌ 1.5 ಕಿ.ಮೀ. ವಿಭಾಗದಲ್ಲಿ ಬುಧವಾರ  ಸ್ವರ್ಣ ಗೆದ್ದುಕೊಂಡರು. ಕೂಟದಲ್ಲಿ ಭವಾನಿ ಅವರಿಗೆ ಇದು ಮೂರನೇ ಪದಕ.

ಕೊಡಗಿನ ಭವಾನಿ ಅವರು 15 ಕಿ.ಮೀ. ಹಾಗೂ 10 ಕಿ.ಮೀ. ರಿಲೇ ಸ್ಪರ್ಧೆಗಳಲ್ಲಿ ಕಂಚು ಜಯಿಸಿದ್ದರು. ಈ ಕೂಟದ ಎಲ್ಲ ಆರೂ ಆವೃತ್ತಿಗಳಲ್ಲಿ ಭಾಗವಹಿಸಿರುವ ಅವರು ಕಳೆದ ಆವೃತ್ತಿಯಲ್ಲಿ ಹ್ಯಾಟ್ರಿಕ್‌ ಚಿನ್ನ ಗೆದ್ದು ಗಮನ ಸೆಳೆದಿದ್ದರು.

‘ಈ ಚಿನ್ನದ ಪದಕವನ್ನು ತಂದೆ–ತಾಯಿಗೆ ಅರ್ಪಿಸುವೆ. ಚಳಿಗಾಲದ ಕೂಟಗಳಲ್ಲಿ ನಾನು ಸತತವಾಗಿ ಭಾಗವಹಿಸುತ್ತಿದ್ದರೂ ನನ್ನ ಪೋಷಕರು ಈವರೆಗೆ ಇಲ್ಲಿನ ಹಿಮವನ್ನು ನೋಡಿಲ್ಲ. ಅವರು ಮುಂದೊಂದು ದಿನ ಗುಲ್ಮಾರ್ಗ್‌ಗೆ ಬಂದು ಹಿಮವನ್ನೂ, ನಾನು ಪದಕ ಗೆಲ್ಲುವುದನ್ನೂ ನೋಡುತ್ತಾರೆಂಬ ಭರವಸೆ ಇದೆ’ ಎಂದರು.

ADVERTISEMENT

ಕ್ರಾಸ್ ಕಂಟ್ರಿ ಸ್ಕೀಯಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸಿದ ದೇಶದ ಮೊದಲ ಮಹಿಳಾ ಅಥ್ಲೀಟ್‌ ಎಂಬ ಗೌರವವೂ ಇವರದ್ದು.

ಸೇನೆಗೆ ಪ್ರಶಸ್ತಿ:

ಭಾರತೀಯ ಸೇನಾಪಡೆಯ ತಂಡವು ಬುಧವಾರ ಮುಕ್ತಾಯಗೊಂಡ ಈ ಕ್ರೀಡಾಕೂಟದ ಟೀಮ್‌ ಚಾಂಪಿಯನ್‌ಷಿಪ್‌ಅನ್ನು ತನ್ನಲ್ಲೇ  ಉಳಿಸಿಕೊಂಡಿತು.

ಸೇನಾ‍ಪಡೆಯ ಅಥ್ಲೀಟ್‌ಗಳು 9 ಚಿನ್ನ ಸೇರಿ ಒಟ್ಟು 23 ಪದಕಗಳನ್ನು ಬಾಚಿಕೊಂಡರು. ಹಿಮಾಚಲ ಪ್ರದೇಶ (14 ಪದಕ; 6 ಚಿನ್ನ, 7 ಬೆಳ್ಳಿ, 1 ಕಂಚು) ಹಾಗೂ ಹರಿಯಾಣ (7 ಪದಕ; 4 ಸ್ವರ್ಣ, 2 ರಜತ ಹಾಗೂ 1 ಕಂಚು) ತಂಡಗಳು ಪದಕ ಪಟ್ಟಿಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡವು.

ಕೂಟದ ಸಮಾರೋಪ ಸಮಾರಂಭವು ಗುಲ್ಮಾರ್ಗ್‌ನ ಗಾಲ್ಫ್‌ ಕೋರ್ಸ್‌ನಲ್ಲಿ ಗುರುವಾರ ನಡೆಯಲಿದೆ. ಈ ಕೂಟದ ಮೊದಲ ಲೆಗ್‌ ಜನವರಿ 20ರಿಂದ 26ರ ವರೆಗೆ ಲಡಾಖ್‌ನಲ್ಲಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.