ADVERTISEMENT

ಬೀಲ್‌ ಚೆಸ್‌ ಉತ್ಸವ: ಪ್ರಶಸ್ತಿಯತ್ತ ಹರಿಕೃಷ್ಣ

ಪಿಟಿಐ
Published 29 ಜುಲೈ 2020, 14:20 IST
Last Updated 29 ಜುಲೈ 2020, 14:20 IST
ಪೆಂಟಾಲ ಹರಿಕೃಷ್ಣ (ಬಲ)– ಪಿಟಿಐ ಸಂಗ್ರಹ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ)– ಪಿಟಿಐ ಸಂಗ್ರಹ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ, ಬೀಲ್‌ ಚೆಸ್‌ ಉತ್ಸವದಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ರಾತ್ರಿ ಕ್ಲಾಸಿಕಲ್‌ ವಿಭಾಗದ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ರೊಮೇನ್‌ ಎಡ್ವರ್ಡ್‌ ಅವರನ್ನು ಮಣಿಸಿದರು.

ಬಿಳಿಕಾಯಿಗಳೊಂದಿಗೆ ಆಡಿದ ವಿಶ್ವದ 26ನೇ ಕ್ರಮಾಂಕದ ಹರಿಕೃಷ್ಣ, 44 ನಡೆಗಳಲ್ಲಿ ಎದುರಾಳಿಯನ್ನು ಸೋಲಿಸಿದರು. ಸದ್ಯ ಅವರು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಡೊಸ್ಲಾವ್‌ ವೊಜಾಸೆಕ್‌ ಅವರನ್ನು ಸಮೀಪಿಸಿದ್ದಾರೆ.

ಮಂಗಳವಾರದ ಗೆಲುವಿನ ಮೂಲಕ ಹರಿಕೃಷ್ಣ ಅವರ ಪಾಯಿಂಟ್‌ಗಳ ಸಂಖ್ಯೆ 32.5ಕ್ಕೆ ಏರಿದೆ. ಅಂದರೆ ಪೋಲೆಂಡ್‌ನ ವೊಜಾಸೆಕ್‌ ಅವರಿಗಿಂತ ಕೇವಲ ಅರ್ಧ ಪಾಯಿಂಟ್ಸ್‌ ಹಿಂದೆ ಇದ್ದಾರೆ. ಹರಿಕೃಷ್ಣ ಅವರು ಕ್ಲಾಸಿಕಲ್‌ ವಿಭಾಗಗಳ ಸತತ ಮೂರು ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ.

ADVERTISEMENT

ಏಳನೇ ಹಾಗೂ ಕೊನೆಯ ಸುತ್ತಿನಲ್ಲಿ ಹರಿಕೃಷ್ಣ ಅವರಿಗೆ ಸ್ಪೇನ್‌ನ ಡೇವಿಡ್‌ ಆ್ಯಂಟನ್‌ ಗಿಜಾರೊ ಸವಾಲು ಎದುರಾಗಲಿದೆ. ಪ್ರಶಸ್ತಿ ಎತ್ತಿಹಿಡಿಯಲು ಭಾರತದ ಪಟುವಿಗೆ ಇಲ್ಲಿ ಗೆಲುವು ಅಗತ್ಯ. ಮತ್ತೊಂದು ಪಂದ್ಯದಲ್ಲಿ ವೊಜಾಸೆಕ್‌ ಅವರು ತಮ್ಮ ಎದುರಾಳಿಯ ವಿರುದ್ಧ ಸೋಲಬೇಕಾಗುತ್ತದೆ.

ಹರಿಕೃಷ್ಣ ಅವರು ಈ ಮೊದಲು ಬೀಲ್‌ ಉತ್ಸವದ ರ‍್ಯಾಪಿಡ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಚೆಸ್‌960 ವಿಭಾಗದಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.